ನೆಲಮಂಗಲ: ಗ್ರಾಮೀಣ ಪ್ರದೇಶದ ಅಡುಗೆ ಮನೆಗಳಲ್ಲೂ ಆಂಗ್ಲ ಭಾಷೆಯ ಪ್ರಭಾವ ಹೆಚ್ಚಾಗುತ್ತಿದ್ದು, ನಮ್ಮ ಸಂಸ್ಕೃತಿಯಲ್ಲಿದ್ದ ಆತ್ಮೀಯ ಸಂಬಂಧಗಳ ಬದಲಾಗಿ ಅಂಕಲ್, ಆಂಟಿ ಎನ್ನುವ ಸಂಬೋಧನೆಗಳು ಹೆಚ್ಚಾಗುತ್ತಿರುವುದರಿಂದ ಸಂಬಂಧಗಳ ಮೌಲ್ಯ ಕಡಿಮೆಯಾಗುತ್ತಿದೆ ಎಂದು ರೋಟರಿ ಸಂಸ್ಥಾಪಕ ಹೆಚ್.ಜಿ. ರಾಜು ಬೇಸರ ವ್ಯಕ್ತಪಡಿಸಿದರು.

ನಗರದ ಕೋಟೆಬೀದಿಯಲ್ಲಿರುವ ಶ್ರೀ ಭುವನೇಶ್ವರಿ ದೇವಾಲಯದ ಆವರಣದಲ್ಲಿ ಕನ್ನಡ ಸಾಂಸ್ಕೃತಿಕ ರಂಗದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ವರ್ಷಕ್ಕೊಮ್ಮೆ ಧ್ವಜಾರೋಹಣ ಮಾಡಿ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಮಾತ್ರ ಸಾಲದು. ನಮ್ಮ ದೈನಂದಿನ ಬದುಕಿನಲ್ಲಿ ಕನ್ನಡ ಭಾಷೆಯನ್ನು ಬಳಸುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಮಕ್ಕಳಿಗೆ ಮನೆಯಲ್ಲಿ ಕನ್ನಡ ಮಾತನಾಡುವುದನ್ನು ಕಲಿಸಬೇಕು. ಕನ್ನಡ ಭಾಷೆ, ಸಂಸ್ಕೃತಿ, ಆಚಾರ-ವಿಚಾರ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಕನ್ನಡದ ಅಸ್ಮಿತೆಯನ್ನು ಉಳಿಸುವ ಕೆಲಸ ಮನೆಮನೆಯಿಂದಲೇ ಆರಂಭವಾಗಬೇಕು ಎಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕ ಎಂ.ವಿ. ನೆಗಳೂರು ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಆದ ಸುದೀರ್ಘ ಇತಿಹಾಸ ಮತ್ತು ಶ್ರೀಮಂತ ಪರಂಪರೆಯಿದೆ. ಹಲವು ರಾಜಮನೆತನಗಳು ಈ ನಾಡನ್ನು ಆಳಿದ್ದು, ಕನ್ನಡ ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ. ಇಂತಹ ಇತಿಹಾಸ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕನ್ನಡ ನಾಡು-ನುಡಿಯ ರಕ್ಷಣೆಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಮುಂದಿನ ದಿನಗಳಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಒಂದಾಗಿ ಇನ್ನಷ್ಟು ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡದ ಹಿರಿಮೆಯನ್ನು ಸಾರೋಣ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕನ್ನಡದ ಮಹತ್ವ, ನಾಡಿನ ಇತಿಹಾಸ, ಕನ್ನಡಪರ ಹೋರಾಟಗಳ ಅಗತ್ಯತೆ ಹಾಗೂ ಯುವಜನತೆಯಲ್ಲಿ ಭಾಷಾಭಿಮಾನ ಬೆಳೆಸುವ ಕುರಿತು ಗಣ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕನ್ನಡವೆಂಬುದು ಕೇವಲ ಸಂವಹನದ ಭಾಷೆಯಲ್ಲ, ಅದು ನಮ್ಮ ನೆಲದ ಸಂಸ್ಕೃತಿ, ಬದುಕು ಮತ್ತು ಅಸ್ಮಿತೆಯ ಪ್ರತೀಕವಾಗಿದೆ. ಭಾಷೆಯ ಮೇಲಿನ ಅಭಿಮಾನ ಕೇವಲ ಆಚರಣೆಗಳಿಗೆ ಸೀಮಿತವಾಗದೆ ಪ್ರತಿಯೊಬ್ಬರ ನಡೆ-ನುಡಿಯಲ್ಲಿ ಪ್ರತಿಬಿಂಬಿಸಬೇಕು ಎಂಬ ಸಂದೇಶ ಕಾರ್ಯಕ್ರಮದಲ್ಲಿ ಮೂಡಿಬಂತು.

ಈ ಸಂದರ್ಭದಲ್ಲಿ ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷ ಸಿದ್ದರಾಜು, ಸಾಹಿತಿ ಚೌಡಯ್ಯ, ಜನಸೈನ್ಯ ಅಧ್ಯಕ್ಷ ನರಸಿಂಹಯ್ಯ, ರೋಟರಿ ಅಧ್ಯಕ್ಷ ಲೋಕೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಭಿಷೇಕ್ ಚಿಕ್ಕಮಾರನಹಳ್ಳಿ, ಕೃಷಿ ಸಂಶೋಧಕ ನಾಗರಾಜು, ಮಾಜಿ ಸೈನಿಕ ಎನ್.ಎಸ್. ಮೂರ್ತಿ (ಮಿಲಿಟರಿ ಮಾಮ), ಶಿವಲಿಂಗಯ್ಯ, ವೆಂಕಟೇಶ್ ಚೌತಾಯಿ, ಸಿರಾಜ್ ಅಹಮದ್, ನೂರುದ್ದಿನ್, ರಾಜಮ್ಮ, ಪ್ರಕಾಶ್, ಸೌಮ್ಯ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ಕನ್ನಡಪರ ಹೋರಾಟಗಾರರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *