ಕೃಷ್ಣರಾಜಪೇಟೆ: ಗಣೇಶೋತ್ಸವ ಕಾರ್ಯಕ್ರಮಗಳು ಸಮುದಾಯದ ಜನರನ್ನು ಒಗ್ಗೂಡಿಸುವ ಮಹತ್ವದ ವೇದಿಕೆಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ಗಣೇಶೋತ್ಸವಗಳು ಹೆಚ್ಚಾಗಿ ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಬೆಂಗಳೂರಿನ ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕೃಷ್ಣರಾಜಪೇಟೆ ತಾಲ್ಲೂಕಿನ ಸಂತೆಬಾಚಹಳ್ಳಿಯಲ್ಲಿ ವಿನಾಯಕ ಗೆಳೆಯರ ಬಳಗ ಹಾಗೂ ಯುವಕರ ಸಂಘದ ವತಿಯಿಂದ ಮಾಜಿ ಅಧ್ಯಕ್ಷ ಶಿವಪ್ಪ ಅವರ ಸಾರಥ್ಯದಲ್ಲಿ ಆಯೋಜಿಸಿದ್ದ 68ನೇ ವರ್ಷದ ಗಣೇಶೋತ್ಸವದ ಅಂಗವಾಗಿ ನಡೆದ ರಸಮಂಜರಿ ಮತ್ತು ಜಾನಪದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಕಳೆದ 68 ವರ್ಷಗಳಿಂದ ನಿರಂತರವಾಗಿ ಗಣೇಶೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿರುವ ಸಂತೆಬಾಚಹಳ್ಳಿ ಯುವಕರ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರ ಕಾರ್ಯವನ್ನು ಶ್ರೀಗಳು ಶ್ಲಾಘಿಸಿ ಅಭಿನಂದಿಸಿದರು.
ಪ್ರಸ್ತುತ ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷ್ಣರಾಜಸಾಗರ ಹಾಗೂ ಹೇಮಾವತಿ ಅಣೆಕಟ್ಟು ಗಳಲ್ಲಿ ನೀರಿನ ಮಟ್ಟ ದಿನೇ ದಿನೆ ಕುಸಿಯುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ನೀರಿನ ಅಭಾವ ಉಂಟಾಗುವ ಆತಂಕವಿದೆ. ಹಲವು ವರ್ಷಗಳಿಂದ ಅಣೆಕಟ್ಟುಗಳಲ್ಲಿ ಸಂಗ್ರಹವಾಗಿರುವ ಹೂಳನ್ನು ತೆರವುಗೊಳಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು. ಈ ಕುರಿತು ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆಯುವಂತೆ ಶಾಸಕ ಹೆಚ್.ಟಿ. ಮಂಜು ಅವರಿಗೆ ಸಲಹೆ ನೀಡಿದರು. ಕೃಷಿಗೆ ಪ್ರತ್ಯೇಕ ಆಯವ್ಯಯ ಮಂಡಿಸುವ ಬಗ್ಗೆಯೂ ಸದನದಲ್ಲಿ ಚರ್ಚಿಸುವಂತೆ ಮನವಿ ಮಾಡಿದರು.
ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಗಣೇಶೋತ್ಸವ ಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗ ಬಾರದು. ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಸಂದರ್ಭದಲ್ಲಿ ಗಣೇಶೋತ್ಸವಗಳು ಜನರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಯುವಜನರು ಈ ಇತಿಹಾಸವನ್ನು ಅರಿತುಕೊಳ್ಳಬೇಕು ಎಂದರು, ಗ್ರಾಮೀಣ ಯುವಕರಿಗೆ ಹೆಣ್ಣು ಕೊಟ್ಟು ವಿವಾಹ ಮಾಡಲು ಹಿಂದೇಟು ಹಾಕುತ್ತಿರುವುದು ಬೇಸರದ ಸಂಗತಿ. ಹಳ್ಳಿಯಲ್ಲಿ ವಾಸಿಸುವ ಯುವಕರೂ ಸಮಾಜದ ಭಾಗವೇ ಆಗಿದ್ದು, ಅವರಿಗೂ ಉತ್ತಮ ವೈವಾಹಿಕ ಜೀವನ ನಡೆಸುವ ಅವಕಾಶ ಕಲ್ಪಿಸಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಟಿ. ಮಂಜು ಗಣೇಶೋತ್ಸವದ ಮಹತ್ವದ ಕುರಿತು ಮಾತನಾಡಿದರು. ಆರ್ಟಿಒ ಮಲ್ಲಿಕಾರ್ಜುನ್ ಹಾಗೂ ಮನ್ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ನವೀನ್ ಕೃಷ್ಣ, ಜೆಡಿಎಸ್ ಯುವ ಮುಖಂಡ ಹುಬ್ಬನಹಳ್ಳಿ ಬಲರಾಮು, ಮೀನಾಕ್ಷಿ ರಮೇಶ್, ಚಂದ್ರಶೇಖರ್, ಸಂಘದ ಅಧ್ಯಕ್ಷ ಜಯಕುಮಾರ್, ಕಾರ್ಯದರ್ಶಿ ಕೃಷ್ಣ, ಗೌರವಾ ಧ್ಯಕ್ಷ ಎಸ್.ಬಿ.ಸೋಮೇಶ್, ಸೋಮಶೇಖರ್, ಆದಿಹಳ್ಳಿ ನಾಗೇಶ್, ಸಂತೇಬಾಚಹಳ್ಳಿ ನಾಗರಾಜು, ರಾಜ್ಯ ಜಾನಪದ ಅಕಾಡೆಮಿ ಸದಸ್ಯರಾದ ಮಂಜೇಶ್ ಚನ್ನಾಪುರ, ಮಲ್ಲಿಕಾರ್ಜುನ ಕೆಂಕೆರೆ, ಉದ್ಯಮಿ ಕ್ರಷರ್ ಚಂದ್ರಶೇಖರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ನಾರಾಯಣಸ್ವಾಮಿ, ಹಿರಿಯ ಪತ್ರಕರ್ತರಾದ ಬಳ್ಳೇಕೆರೆ ಮಂಜುನಾಥ್, ಕಿಕ್ಕೇರಿ ಬಲರಾಮ, ಸಿಂದಘಟ್ಟ ನಾಗೇಶ್, ದೊಡ್ಡಹಾರನ ಹಳ್ಳಿ ಮಲ್ಲೇಶ್, ಕೆ.ಪಿ. ಮಂಜುನಾಥ್, ಲೋಕೇಶ್, ಶ್ಯಾರಹಳ್ಳಿ ಗೋವಿಂದರಾಜು, ಮಾಕವಳ್ಳಿ ರಂಗನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳು, ಮೂಡಲಪಾಯ ಯಕ್ಷಗಾನ ಹಾಗೂ ಭರತ ನಾಟ್ಯ ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಜನರು ಭಾಗವಹಿಸಿದ್ದರು.
ಸಂತೆಬಾಚಹಳ್ಳಿ ನಾಗರಾಜು ಸ್ವಾಗತಿಸಿದರೆ ಹಿರಿಯ ಪತ್ರಕರ್ತ ಕೆ.ಆರ್. ನೀಲಕಂಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
