ನೆಲಮಂಗಲ: ಮಹಾತ್ಮ ಗಾಂಧೀಜಿಯವರಲ್ಲಿದ್ದ ರಾಷ್ಟ್ರಪ್ರೇಮದ ಮನೋಭಾವ ಸಮಾಜದ ಪ್ರತಿಯೊಬ್ಬ ಮಗುವಿನಲ್ಲೂ ಬೆಳೆಸುವುದು ಅಗತ್ಯ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವೀರಸಾಗರ ಭಾನುಪ್ರಕಾಶ್‌ ಹೇಳಿದರು.

ಬೈರಸಂದ್ರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿಯವರ ಶಾಂತಿ, ಅಹಿಂಸೆ, ರಾಷ್ಟ್ರಪ್ರೇಮ, ಸ್ವದೇಶಿ ಮಂತ್ರ, ಗ್ರಾಮವಿಕಾಸ ಹಾಗೂ ಸ್ವಚ್ಛ ಭಾರತ ಸೇರಿದಂತೆ ಹಲವು ಪರಿಕಲ್ಪನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಗಾಂಧೀಜಿಯವರ ಆದರ್ಶಗಳನ್ನು ಮನೆಗಳಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು ಹಾಗೂ ಸಮಾಜದಲ್ಲಿ ಬುದ್ಧಿಜೀವಿಗಳು ಮಕ್ಕಳಿಗೆ ತಿಳಿಸಿಕೊಡಬೇಕಾದ ಅನಿವಾರ್ಯತೆ ಇದೆ. ವಿದ್ಯಾರ್ಥಿಗಳು ಗಾಂಧೀಜಿಯವರ ಪುಸ್ತಕಗಳನ್ನು ಓದಿ, ಅವರ ಸಂದೇಶಗಳನ್ನು ಜೀವನದಲ್ಲಿ ಪಾಲಿಸಬೇಕು ಎಂದು ಸಲಹೆ ನೀಡಿದರು.

ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ್ಯ ವಿಜಯ್ ಹೊಸಪಾಳ್ಯ ಮಾತನಾಡಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಬಗ್ಗೆ ಗಾಂಧೀಜಿ ಅಪಾರ ಕನಸು ಕಂಡಿದ್ದರು. ಅವರ ಸಲಹೆ, ಸೂಚನೆ, ಮಾರ್ಗದರ್ಶನ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಗ್ರಾಮಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸುವ ಕಾರ್ಯಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂದರು.

ಗಾಂಧೀಜಿಯವರ ರಾಷ್ಟ್ರಪ್ರೇಮ, ಪರಿಸರ ಕಾಳಜಿ ಹಾಗೂ ಸ್ವಚ್ಛತೆಯ ಪರಿಕಲ್ಪನೆಗಳು ಪ್ರತಿಯೊಬ್ಬರಲ್ಲಿಯೂ ಬೆಳೆಸಬೇಕಾಗಿದೆ. ತಾವು ಶಿಕ್ಷಣ ಪಡೆದ ಶಾಲೆಗಳ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳು ತಮ್ಮ ಕೈಲಾದ ಸಹಕಾರ ನೀಡಬೇಕು. ಈ ಉದ್ದೇಶದಿಂದ ಕುಮುಧ್ವತಿ ಸಂಸ್ಥೆ ಮಾಲೀಕ ಚಿಕ್ಕಹನುಮೇಗೌಡರ ಸಹಕಾರದೊಂದಿಗೆ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಸಮವಸ್ತ್ರ, ಭಗವದ್ಗೀತೆ ವಿತರಣೆ: ಗಾಂಧೀಜಿ ಜಯಂತಿ ಅಂಗವಾಗಿ ಅಂಗನವಾಡಿ ಹಾಗೂ 1ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಕುಮುಧ್ವತಿ ಸಂಸ್ಥೆ ಮಾಲೀಕ ಚಿಕ್ಕಹನುಮೇಗೌಡ ಹಾಗೂ ವಿಜಯ್ ಹೊಸಪಾಳ್ಯ ಅವರ ಸಹಕಾರದೊಂದಿಗೆ ಟ್ರ್ಯಾಕ್‌ಶೂಟ್‌ಗಳನ್ನು (ಸಮವಸ್ತ್ರ) ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಪುಸ್ತಕಗಳನ್ನು ವಿತರಿಸಿ, ಅದನ್ನು ಅಭ್ಯಾಸ ಮಾಡುವಂತೆ ತಿಳಿಸಲಾಯಿತು. ಮುಂದಿನ ಗಾಂಧೀ ಜಯಂತಿಯ ಸಂದರ್ಭದಲ್ಲಿ ಭಗವದ್ಗೀತೆಯ ಕುರಿತು ಮಾಹಿತಿ ನೀಡುವ ವಿದ್ಯಾರ್ಥಿಗೆ ₹1,000 ಬಹುಮಾನ ನೀಡುವುದಾಗಿ ಘೋಷಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ವಿಜಯ್‌ಕುಮಾರ್ ಹೆಚ್.ಎಸ್., ಕಸಾಪ ಗೌರವ ಕಾರ್ಯದರ್ಶಿ ಸಿದ್ದಯ್ಯ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಕೃಷ್ಣಮೂರ್ತಿ, ಮುಖ್ಯಶಿಕ್ಷಕಿ ರಾಧ, ಅಂಗನವಾಡಿ ಶಿಕ್ಷಕಿ ಶಿಲ್ಪಾ, ಎಸ್‌ಡಿಎಂಸಿ ಸದಸ್ಯ ಕರಿಹನುಮಯ್ಯ, ಹೊಸಪಾಳ್ಯ ಹಾಲಿನ ಡೈರಿ ಕಾರ್ಯದರ್ಶಿ ಪವನ್‌ಕುಮಾರ್, ಮುಖಂಡರಾದ ವಸಂತ್, ಮಂಜು, ರಾಜೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

English Summary:

Nelamangala: Press Club Council president Vijay Hosapalya and Karnataka Sahitya Parishath president Veerasagara Bhanuprakash stressed the importance of nurturing patriotism and Gandhi’s ideals among students. Speaking at the Gandhi Jayanti programme held at the Government Primary School in Bairasandra, they highlighted Mahatma Gandhi’s principles of peace, non-violence, patriotism, Swadeshi, rural development and cleanliness. Vijay Hosapalya urged former students to support the development of their schools, while Veerasagara Bhanuprakash encouraged students to read Gandhi’s books and follow his teachings.

Spread the love

Leave a Reply

Your email address will not be published. Required fields are marked *