ಬೆಳಗಾವಿ: ಕಬ್ಬಿನ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರ ಹೋರಾಟ ತೀವ್ರಗೊಂಡಿದ್ದು, ಇದೀಗ ಸಕ್ಕರೆ ಸಾಗಿಸುತ್ತಿದ್ದ ಲಾರಿಗಳಿಗೂ ರೈತರು ಅಡ್ಡಿಪಡಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಖಟಕಭಾವಿ ಕ್ರಾಸ್‌ನಲ್ಲಿ ನಡೆದಿದೆ. ನಿರಾಣಿ ಶುಗರ್ ಫ್ಯಾಕ್ಟರಿಯಿಂದ ಸಕ್ಕರೆ ಸಾಗಿಸುತ್ತಿದ್ದ ಐದು ಲಾರಿಗಳನ್ನು ರಸ್ತೆಯಲ್ಲೇ ತಡೆದ ರೈತರು, ಲಾರಿಗಳ ಟೈರ್‌ಗಳ ಗಾಳಿ ತೆಗೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ನಿಗದಿಪಡಿಸುವವರೆಗೆ ಸಕ್ಕರೆ ಮಾರಾಟ ಮಾಡಬಾರದು ಎಂಬುದು ರೈತರ ಪ್ರಮುಖ ಒತ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಸಕ್ಕರೆ ಸಾಗಿಸುತ್ತಿದ್ದ ಲಾರಿಗಳನ್ನು ತಡೆದ ರೈತರು, ಕೂಡಲೇ ಲಾರಿಗಳನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ಚಾಲಕರಿಗೆ ತಾಕೀತು ಮಾಡಿದ್ದಾರೆ. ರೈತರ ಬೇಡಿಕೆ ಈಡೇರುವವರೆಗೆ ಕಾರ್ಖಾನೆಯಿಂದ ಸಕ್ಕರೆ ಸಾಗಣೆ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.


ಸಕ್ಕರೆ ಸಾಗಣೆಗೆ ಅಡ್ಡಿಪಡಿಸಿದ ರೈತರು, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಿದ ಬಳಿಕವೇ ಸಕ್ಕರೆ ಮಾರಾಟ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕಬ್ಬಿನ ಬೆಲೆ ವಿಚಾರದಲ್ಲಿ ರೈತರಿಗೆ ನ್ಯಾಯ ಸಿಗುವವರೆಗೆ ಸಕ್ಕರೆ ಕಾರ್ಖಾನೆಗಳು ತಮ್ಮ ಉತ್ಪನ್ನಗಳ ಮಾರಾಟಕ್ಕೆ ಮುಂದಾಗಬಾರದು ಎಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳ ಗೋದಾಮುಗಳಿಗೂ ರೈತರು ಮುತ್ತಿಗೆ ಹಾಕಿದ್ದರು. ಕಾರ್ಖಾನೆಗಳಲ್ಲಿ ಸಂಗ್ರಹಿಸಿರುವ ಸಕ್ಕರೆಯನ್ನು ಮಾರಾಟ ಮಾಡದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಕಬ್ಬಿನ ಬೆಲೆ ನಿಗದಿಯಾಗದೆ ಸಕ್ಕರೆ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.


ಇದೀಗ ನಿರಾಣಿ ಶುಗರ್ ಫ್ಯಾಕ್ಟರಿಯಿಂದ ಸಕ್ಕರೆ ಸಾಗಿಸುತ್ತಿದ್ದ ಐದು ಲಾರಿಗಳನ್ನು ತಡೆದಿರುವುದು ರೈತರ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವವರೆಗೆ ಸಕ್ಕರೆ ಸಾಗಣೆ ಮತ್ತು ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ರೈತರು ನೀಡಿದ್ದಾರೆ.


ಕಬ್ಬಿನ ಬೆಲೆ ನಿಗದಿ, ಸಕ್ಕರೆ ಮಾರಾಟ ಹಾಗೂ ರೈತರ ಹಿತಾಸಕ್ತಿಗೆ ಸಂಬAಧಿಸಿದAತೆ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂಬ ಒತ್ತಾಯ ಹೆಚ್ಚಾಗಿದೆ. ರೈತರ ಸಮಸ್ಯೆಗೆ ಶೀಘ್ರ ಪರಿಹಾರ ಸಿಗದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.

Spread the love

Leave a Reply

Your email address will not be published. Required fields are marked *