ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆದ ವರ್ಷದ ದಸರಾ ಸಂದರ್ಭದಲ್ಲಿ ಬಲೂನ್ ಮಾರಲು ಬಂದಿದ್ದ 9 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿ ಕಾರ್ತಿಕ್ (32) ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ. ಮೈಸೂರು ಶೀಘ್ರಗತಿ ನ್ಯಾಯಾಲಯದ ನ್ಯಾಯಾಧೀಶ ಅನಿಲ್ ಪಿ. ವಘಾಢೆ ಅವರು ಅಪರಾಧ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದು, ಅಕ್ಟೋಬರ್ 16ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.
ದಸರಾ ವೇಳೆ ನಡೆದಿದ್ದ ಭೀಕರ ಘಟನೆ
ಕಳೆದ ವರ್ಷ ದಸರಾ ಹಿನ್ನೆಲೆಯಲ್ಲಿ ಬಾಲಕಿಯ ಕುಟುಂಬ ಕಲಬುರಗಿಯಿಂದ ಬಲೂನ್ ಮಾರಾಟ ಮಾಡಲು ಮೈಸೂರಿಗೆ ಬಂದಿತ್ತು. ದಸರಾ ವಸ್ತುಪ್ರದರ್ಶನದ ಸಮೀಪ ಟೆಂಟ್ ಹಾಕಿಕೊಂಡು ಕುಟುಂಬ ವಾಸ್ತವ್ಯ ಮಾಡಿತ್ತು. ರಾತ್ರಿ ಕುಟುಂಬದವರು ಟೆಂಟ್ನಲ್ಲಿ ಮಲಗಿದ್ದ ವೇಳೆ 9 ವರ್ಷದ ಬಾಲಕಿಯನ್ನು ಆರೋಪಿ ಕಾರ್ತಿಕ್ ಎಳೆದೊಯ್ದು ಅತ್ಯಾಚಾರ ಎಸಗಿ, ಭೀಕರವಾಗಿ ಕೊಲೆ ಮಾಡಿದ್ದ ಎಂದು ಪ್ರಕರಣದಲ್ಲಿ ಆರೋಪಿಸಲಾಗಿತ್ತು.
24 ಗಂಟೆಯೊಳಗೆ ಆರೋಪಿ ಬಂಧನ
ಘಟನೆಗೆ ಸಂಬಂಧಿಸಿದಂತೆ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಕೈಗೊಂಡು ಘಟನೆ ನಡೆದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಕಾರ್ತಿಕ್ ಅಪರಾಧಿ ಎಂದು ಘೋಷಿಸಿದೆ.
ಬಾಲಕಿಯ ಮೇಲೆ ನಡೆದಿದ್ದ ಕೃತ್ಯ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ನ್ಯಾಯಾಲಯದಲ್ಲಿ ಅಪರಾಧ ಸಾಬೀತಾಗಿದ್ದು, ಅಕ್ಟೋಬರ್ 16ರಂದು ಪ್ರಕಟವಾಗಲಿರುವ ಶಿಕ್ಷೆಯ ಪ್ರಮಾಣದತ್ತ ಎಲ್ಲರ ಗಮನ ನೆಟ್ಟಿದೆ.
