ನೆಲಮಂಗಲ: ವಿಶ್ವ ಹಿಂದೂ ಪರಿಷದ್ ವಿಶ್ವದಾದ್ಯಂತ ಇರುವ ಹಿಂದೂ ಸಮಾಜದ ಹಿತ, ಏಕತೆ, ಸಂಘಟನೆ ಹಾಗೂ ಸೇವೆಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಬೃಹತ್ ಸಂಘಟನೆಯಾಗಿದೆ ಎಂದು ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆ, ಪವಾಡ ಶ್ರೀ ಬಸವಣ್ಣದೇವರ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿ ಹೇಳಿದರು.
ವಿಶ್ವ ಹಿಂದೂ ಪರಿಷದ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ವತಿಯಿಂದ ಪವಾಡ ಶ್ರೀ ಬಸವಣ್ಣದೇವರ ಮಠದಲ್ಲಿ
ಆಯೋಜಿಸಿದ್ದ ಹಿತಚಿಂತಕರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೂರು ವರ್ಷಕ್ಕೊಮ್ಮೆ ನಡೆಯುವ “ಹಿತಚಿಂತಕರ ಅಭಿಯಾನ2026” ಹಿಂದೂ ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತದೆ ಆಸಕ್ತಿ ಹೊಂದಿರುವ ಸಮಾಜದ ವಿವಿಧ ಸ್ತರಗಳ ಜನರನ್ನು ಸಂಘಟನೆಯೊಂದಿಗೆ ನೋಂದಾಯಿಸಿಕೊಳ್ಳುವ ವಿಶೇಷ ಅಭಿಯಾನವಾಗಿದ್ದು,ಹಿತಚಿಂತಕರ ಮೂಲಕ ಹಿಂದೂ ಸಮಾಜದ ಎಲ್ಲ ವರ್ಗದ ಜನರಹಿತಕ್ಕಾಗಿ ವಿವಿಧ ಸೇವಾ ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ನಾಶಮುಕ್ತ, ರೋಗಮುಕ್ತ ಹಾಗೂ ಸದೃಢ ಸಮಾಜ ನಿರ್ಮಾಣ, ರೈತರಿಗೆ ಗೋ ಆಧಾರಿತ ಸಾವಯವ ಕೃಷಿ ಕುರಿತು ತರಬೇತಿ ಶಿಬಿರಗಳು, ಗೋ ಸಂರಕ್ಷಣೆ, ನೀರಿನ ಬಾವಿ, ದೇವಸ್ಥಾನ ಮತ್ತು ರುದ್ರಭೂಮಿಗಳಲ್ಲಿ ಜಾತಿ-ಮತ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಮತ್ತು ಸಾಮಾಜಿಕ ಸಾಮರಸ್ಯ ಮೂಡಿಸುವ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷದ್ ಕೋಲಾರ ವಿಭಾಗ ಕಾರ್ಯದರ್ಶಿ ಗೌರಿಶಂಕರ್ ಮಾತನಾಡಿ, ಕಳೆದ 2023 ರಲ್ಲಿ ನಡೆದ ಹಿತಚಿಂತಕರ ಅಭಿಯಾನದಲ್ಲಿ ಭಾರತದಲ್ಲಿ 64 ಲಕ್ಷಕ್ಕೂ ಅಧಿಕ ಹಿತಚಿಂತಕರು ನೋಂದಣಿಯಾಗಿದ್ದರು. ಪ್ರಸ್ತುತ 2026 ರ ಅಭಿಯಾನದಲ್ಲಿ ದೇಶಾದ್ಯಂತ 1 ಕೋಟಿ ಹಿತಚಿಂತಕರನ್ನು ನೋಂದಾಯಿಸುವ ಮಹತ್ವಕಾಂಕ್ಷಿ ಗುರಿಯನ್ನು ಹೊಂದಲಾಗಿದೆ, ವಿಶ್ವ ಹಿಂದೂ ಪರಿಷತ್ತಿನ ನೇತೃತ್ವದಲ್ಲಿ ದೇಶಾದ್ಯಂತ 7,500 ಕ್ಕೂ ಅಧಿಕ ಸೇವಾ ಕೇಂದ್ರಗಳು ಹಾಗೂ 50,000 ಕ್ಕೂ ಅಧಿಕ ವಿವಿಧ ಸೇವಾ ರೀತಿಯ ಚಟುವಟಿಕೆಗಳು ನಡೆಯುತ್ತಿವೆ. 2025 ರಲ್ಲಿ ಒಂದು ಲಕ್ಷಕ್ಕೂ ಅಧಿಕ ಗೋವುಗಳ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅದೇ ರೀತಿ ಧರ್ಮಜಾಗೃತಿ, ಧರ್ಮರಕ್ಷಣೆ ಹಾಗೂ ಹಿಂದೂ ಸಮಾಜದ ಸಂಘಟನೆಗಾಗಿ ದೇಶಾದ್ಯಂತ 40,000 ಅಧಿಕ ಸತ್ಸಂಗ ಕೇಂದ್ರಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಲಾಗುತ್ತದೆ.
ಬಜರಂಗದಳ ಕೋಲಾರ ವಿಭಾಗ ಸಂಯೋಜಕ ಕೃಷ್ಣಮೂರ್ತಿ ಮಾತನಾಡಿ,“ಹಿತಚಿಂತಕರ ಅಭಿಯಾನವು ಕೇವಲ ನೋಂದಣಿ ಕಾರ್ಯಕ್ರಮವಲ್ಲ, ಸಮಾಜದ ಹಿತಕ್ಕಾಗಿ ಸೇವೆ, ಸಮರ್ಪಣೆ ಮತ್ತು ಸಂಘಟನೆಯೊಂದಿಗೆ ಕೈಜೋಡಿಸುವ ಮಹತ್ವದ ಅವಕಾಶವಾಗಿದೆ.” ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 30 ಸಾವಿರ ಕ್ಕೂ ಹೆಚ್ಚು ಜನರ ಹಿತಚಿಂತಕ ಅಭಿಯಾನದ ಗುರಿ ಹೊಂದಲಾಗಿದೆ ಎಂದರು.
ಸಮಾಜದ ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಯುವಕರು, ಮಹಿಳೆಯರು ಹಾಗೂ ಸಮಸ್ತ ಹಿಂದೂ ಬಾಂಧವರು ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಿತಚಿಂತಕರಾಗಿ ನೋಂದಾಯಿಸಿಕೊಳ್ಳಬೇಕೆಂದು ವಿಶ್ವ ಹಿಂದೂ ಪರಿಷದ್ ಮನವಿ ಮಾಡಿದೆ.
ವಿಶ್ವ ಹಿಂದೂ ಪರಿಷದ್ ಕೋಲಾರ ವಿಭಾಗ ಸಹ ಕಾರ್ಯದರ್ಶಿ ರವಿ, ಬಜರಂಗದಳ ಪ್ರಾಂತ ವಿಧ್ಯಾರ್ಥಿ ಪ್ರಮುಖ್ ಶಿವು, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್, ಜಿಲ್ಲಾ ಉಪಾಧ್ಯಕ್ಷ ರಾಮು, ಬಜರಂಗದಳ ಜಿಲ್ಲಾ ಸಂಯೋಜಕ ಭಗತ್ ಭಾಸ್ಕರ್, ಬಜರಂಗದಳ ಜಿಲ್ಲಾ ಸಂಯೋಜಕ ಶಿವಾಜಿ ಮಣಿ ಸೇರಿದಂತೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರು ಇದ್ದರು.
ವಿಶ್ವ ಹಿಂದೂ ಪರಿಷದ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ವತಿಯಿಂದ ಆಯೋಜಿಸಿದ್ದ ಹಿತಚಿಂತಕರ ಅಭಿಯಾನದಲ್ಲಿ
ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆಯ ಹಾಗೂ ಪವಾಡ ಶ್ರೀ ಬಸವಣ್ಣದೇವರ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಜೀ ಅವರು ಹಿತಚಿಂತಕರಾಗುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
