ಚಿತ್ರದುರ್ಗ: ಯುವಕನ ಇಚ್ಛೆಗೆ ವಿರುದ್ಧವಾಗಿ ಗುಪ್ತಾಂಗದ ಶಸ್ತ್ರಚಿಕಿತ್ಸೆ ಮಾಡಿಸಿದ ಹಾಗೂ ಹಿಂಸೆ ನೀಡಿದ ಆರೋಪದ ಮೇಲೆ ಇಬ್ಬರು ಮಂಗಳಮುಖಿಯರನ್ನು ಚಿತ್ರದುರ್ಗ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬುದ್ಧನಗರದ ನಿವಾಸಿಗಳಾದ ಅನುಷ್ಕಾ ಮತ್ತು ನಳಿನಾ ಬಂಧಿತ ಆರೋಪಿಗಳಾಗಿದ್ದಾರೆ.

ಚಿತ್ರದುರ್ಗದಲ್ಲಿ ಹೂವು ವ್ಯಾಪಾರ ಮಾಡುತ್ತಿದ್ದ 25 ವರ್ಷದ ಯುವಕನಿಗೆ ಹೂವು ನೀಡುವ ಸಂದರ್ಭದಲ್ಲಿ ಇಬ್ಬರು ಮಂಗಳಮುಖಿಯರ ಪರಿಚಯವಾಗಿತ್ತು ಎನ್ನಲಾಗಿದೆ. ಬಳಿಕ ಯುವಕನ ಪರಿಚಯ ಮತ್ತು ಆತ್ಮೀಯತೆಯನ್ನು ದುರುಪಯೋಗಪಡಿಸಿಕೊಂಡು, ಸೆಪ್ಟೆಂಬರ್ 1ರಂದು ಆತನ ಇಚ್ಛೆಗೆ ವಿರುದ್ಧವಾಗಿ ಗುಪ್ತಾಂಗದ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬಿಸಿನೀರು, ಕೆಂಡದಿಂದ ಸುಟ್ಟು ಹಿಂಸೆ ನೀಡಿದ ಆರೋಪ

ಶಸ್ತ್ರಚಿಕಿತ್ಸೆ ಮಾಡಿಸಿದ ಆರೋಪದ ಜೊತೆಗೆ, ಯುವಕನ ತೊಡೆಗಳ ಮೇಲೆ ಬಿಸಿನೀರು ಹಾಗೂ ಕೆಂಡದಿಂದ ಸುಟ್ಟು ಹಿಂಸೆ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಸದ್ಯ ಯುವಕ ತನ್ನ ಸ್ವಗ್ರಾಮದಲ್ಲಿ ನೆಲೆಸಿದ್ದಾನೆ ಎಂದು ತಿಳಿದುಬಂದಿದೆ.

ಈ ಸಂಬಂಧ ಯುವಕನ ತಂದೆ ಪರಶುರಾಂಪುರ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 9ರಂದು ದೂರು ದಾಖಲಿಸಿದ್ದರು. ಪ್ರಕರಣದ ಸ್ವರೂಪದ ಹಿನ್ನೆಲೆಯಲ್ಲಿ ದೂರು ಮುಂದಿನ ತನಿಖೆಗಾಗಿ ಚಿತ್ರದುರ್ಗ ನಗರ ಠಾಣೆಗೆ ವರ್ಗಾವಣೆಯಾಗಿತ್ತು.

ಆರೋಪಿಗಳ ಬಂಧನ

ಪ್ರಕರಣದ ತನಿಖೆ ಕೈಗೊಂಡ ಚಿತ್ರದುರ್ಗ ನಗರ ಠಾಣೆ ಪೊಲೀಸರು, ಬುದ್ಧನಗರದ ನಿವಾಸಿಗಳಾದ ಅನುಷ್ಕಾ ಮತ್ತು ನಳಿನಾ ಅವರನ್ನು ಚಳ್ಳಕೆರೆ ಗೇಟ್‌ ಬಳಿ ಸುತ್ತಾಡುತ್ತಿದ್ದ ವೇಳೆ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಯುವಕನ ಆರೋಪಗಳು ಹಾಗೂ ಘಟನೆಗೆ ಸಂಬಂಧಿಸಿದ ಇತರ ಅಂಶಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕಿದೆ.

Spread the love

Leave a Reply

Your email address will not be published. Required fields are marked *