ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.
ಸಿಸಿಬಿ ಅಧಿಕಾರಿಗಳು ಕಾರಾಗೃಹದಲ್ಲಿ ನಡೆಸಿದ ವಿಶೇಷ ಶೋಧ ಕಾರ್ಯಾಚರಣೆ ವೇಳೆ ಮೊಬೈಲ್ ಫೋನ್ ಪತ್ತೆಯಾಗಿದೆ ಎನ್ನಲಾಗಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಬಿ ಇನ್ಸ್‌ಪೆಕ್ಟರ್ ಸುಬ್ರಮಣ್ಯಸ್ವಾಮಿ ಅವರು ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ವಿವರವಾದ ದೂರು ನೀಡಿದ್ದಾರೆ.
ಜೈಲಿನ ಬ್ಯಾರಕ್‌ಗಳಲ್ಲಿ ವಿಶೇಷ ತಪಾಸಣೆ
ಬೆಂಗಳೂರು ನಗರ ಅಪರ ಪೊಲೀಸ್ ಆಯುಕ್ತರ ನಿರ್ದೇಶನದಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿವಿಧ ಬ್ಯಾರಕ್‌ಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಜೈಲಿನೊಳಗೆ ಅಕ್ರಮವಾಗಿ ಇಟ್ಟುಕೊಂಡಿರುವ ಮೊಬೈಲ್ ಫೋನ್‌ಗಳು, ಮಾದಕ ವಸ್ತುಗಳು ಸೇರಿದಂತೆ ನಿಷೇಧಿತ ವಸ್ತುಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಈ ಹಿನ್ನೆಲೆಯಲ್ಲಿ ಹೈ-ಸೆಕ್ಯೂರಿಟಿ ಬ್ಯಾರಕ್‌ಗಳಲ್ಲೂ ಶೋಧ ನಡೆಸಲು ಸಿಸಿಬಿ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಶೋಧ ಕಾರ್ಯಾಚರಣೆಯ ವೇಳೆ ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪಂಚರ ಸಮ್ಮುಖದಲ್ಲಿ ಶೋಧ
ಕಾರಾಗೃಹದ ಹೈ-ಸೆಕ್ಯೂರಿಟಿ ಬ್ಯಾರಕ್‌ಗಳಲ್ಲಿ ನಡೆಸುವ ಶೋಧ ಕಾರ್ಯಾಚರಣೆಗೆ ಸಂಬಂಧಿಸಿದಂತೆ ನಿಯಮಾನುಸಾರ ಪಂಚರನ್ನು ನೇಮಿಸುವಂತೆ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಮನವಿ ಮಾಡಲಾಗಿತ್ತು. ಶೋಧದ ವೇಳೆ ಪತ್ತೆಯಾಗುವ ಯಾವುದೇ ನಿಷೇಧಿತ ವಸ್ತುಗಳನ್ನು ವಶಕ್ಕೆ ಪಡೆದು, ಅದರ ಕುರಿತು ಸೂಕ್ತ ದಾಖಲೆಗಳನ್ನು ಸಿದ್ಧಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ಮೊಬೈಲ್ ಫೋನ್ ಯಾವ ರೀತಿಯಲ್ಲಿ ಜೈಲಿನೊಳಗೆ ಪ್ರವೇಶಿಸಿತು, ಅದನ್ನು ಪ್ರಜ್ವಲ್ ರೇವಣ್ಣ ಅವರ ಸೆಲ್‌ಗೆ ತಲುಪಿಸಿದವರು ಯಾರು ಹಾಗೂ ಅದನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿತ್ತು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್ ಫೋನ್‌ನ್ನು ವಶಕ್ಕೆ ಪಡೆದು ಅದರಲ್ಲಿರುವ ಮಾಹಿತಿಯನ್ನೂ ಪರಿಶೀಲಿಸುವ ಸಾಧ್ಯತೆಯಿದೆ. ಜೈಲಿನ ಭದ್ರತಾ ವ್ಯವಸ್ಥೆಯನ್ನು ಮೀರಿ ಮೊಬೈಲ್ ಒಳಗೆ ಬಂದಿರುವುದು ಹೇಗೆ ಎಂಬುದರ ಬಗ್ಗೆಯೂ ತನಿಖೆ ಮುಂದುವರಿದಿದೆ.
