ನೆಲಮಂಗಲ: ಮಗಳ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ರಸ್ತೆ ಅಪಘಾತವೊಂದು ಆಘಾತ ತಂದಿದೆ. ಮಗಳ ವಿವಾಹದ ಲಗ್ನಪತ್ರಿಕೆ ಹಂಚಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಂಪತಿಗೆ ಹಿಂಬದಿಯಿಂದ ಬಂದ ಸಿಮೆಂಟ್ ಲಾರಿ ಡಿಕ್ಕಿ ಹೊಡೆದು ಹರಿದ ಪರಿಣಾಮ ಪತ್ನಿ ಸ್ಥಳದಲ್ಲೇ ಹಸುನಿಗಿದ್ದು, ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿ ಬಳಿ ನಡೆದಿದೆ.

ಮೃತ ಮಹಿಳೆಯನ್ನು 42 ವರ್ಷದ ಲಕ್ಷ್ಮೀ ದೇವಿ ಅಲಿಯಾಸ್ ದೇವಮ್ಮ ಎಂದು ಗುರುತಿಸಲಾಗಿದೆ. ಅವರ ಪತಿ 48 ವರ್ಷದ ವಿಜಯ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಮದುರೆ ಹೋಬಳಿಯ ಉದ್ದಿಚಿಕ್ಕನಹಳ್ಳಿ ಗ್ರಾಮದ ನಿವಾಸಿಗಳಾದ ಈ ದಂಪತಿ ಮಗಳ ಮದುವೆಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು.

ನವೆಂಬರ್ 26, 27ರಂದು ಮಗಳ ಮದುವೆ ನಿಗದಿ

ದಂಪತಿಯ ಪುತ್ರಿ ಇಂದ್ರಾಣಿ ಅವರ ವಿವಾಹವನ್ನು ನವೆಂಬರ್ 26 ಮತ್ತು 27ರಂದು ನಿಗದಿಪಡಿಸಲಾಗಿತ್ತು. ಮಗಳ ಮದುವೆಯ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ದಂಪತಿ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಲಗ್ನಪತ್ರಿಕೆ ಹಂಚುತ್ತಿದ್ದರು ಎನ್ನಲಾಗಿದೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಜಯ್ ಕುಮಾರ್ ಸಾಲ ಮಾಡಿ ಮಗಳ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಮಗಳ ವಿವಾಹವನ್ನು ಸಂಭ್ರಮದಿಂದ ನೆರವೇರಿಸಬೇಕೆಂಬ ಉದ್ದೇಶದಿಂದ ಕುಟುಂಬದವರು ಮದುವೆಯ ಸಿದ್ಧತೆಗಳಲ್ಲಿ ನಿರತರಾಗಿದ್ದರು.

ಮೈಲನಹಳ್ಳಿ ಬಳಿ ಸಿಮೆಂಟ್ ಲಾರಿ ಅಪಘಾತ

ಇಂದು ಕೂಡ ನೆಲಮಂಗಲದಲ್ಲಿರುವ ಸಂಬಂಧಿಕರಿಗೆ ಮದುವೆಯ ಆಹ್ವಾನ ಪತ್ರಿಕೆ ನೀಡಲು ದಂಪತಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಮೈಲನಹಳ್ಳಿ ಸಮೀಪ ಹಿಂಬದಿಯಿಂದ ಬಂದ ಸಿಮೆಂಟ್ ಲಾರಿ ದಂಪತಿ ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಹರಿದಿದೆ ಎನ್ನಲಾಗಿದೆ.

ಅಪಘಾತದ ಪರಿಣಾಮ ದೇವಮ್ಮ ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಹಸುನಿಗಿದ್ದರೆ. ವಿಜಯ್ ಕುಮಾರ್ ಅವರ ಕಾಲುಗಳ ಮೇಲೂ ಲಾರಿ ಹರಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಕಾಲಿಗೆ ತೀವ್ರ ಹಾನಿಯಾಗಿದೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮದುವೆ ಸಂಭ್ರಮದ ಮನೆಯಲ್ಲಿ ದುಃಖದ ವಾತಾವರಣ

ಮಗಳ ಮದುವೆಗೆ ಸಂಬಂಧಿಕರು ಮತ್ತು ಸ್ನೇಹಿತರನ್ನು ಆಹ್ವಾನಿಸಲು ಹೊರಟಿದ್ದ ದಂಪತಿಗೆ ಸಂಭವಿಸಿದ ಈ ದುರಂತ ಕುಟುಂಬದ ಸಂತೋಷವನ್ನು ಕಸಿದುಕೊಂಡಿದೆ. ಮದುವೆಯ ಸಿದ್ಧತೆಗಳ ನಡುವೆ ತಾಯಿ ಮೃತಪಟ್ಟಿದ್ದು, ತಂದೆ ಗಂಭೀರವಾಗಿ ಗಾಯಗೊಂಡಿರುವುದರಿಂದ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ.

ಮಗಳ ಮದುವೆಯನ್ನು ಕಣ್ತುಂಬಿಕೊಳ್ಳಬೇಕಿದ್ದ ತಾಯಿ ದೇವಮ್ಮ ಅಪಘಾತದಲ್ಲಿ ಮೃತಪಟ್ಟಿರುವುದು ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಮದುವೆ ಸಂಭ್ರಮದಿಂದ ಕಳೆಯಬೇಕಿದ್ದ ಮನೆಯಲ್ಲಿ ಇದೀಗ ದುಃಖದ ವಾತಾವರಣ ಆವರಿಸಿದೆ.

ಮೃತ ದೇವಮ್ಮ ಅವರ ದೇಹವನ್ನು ನೆಲಮಂಗಲದ ಶವಾಗಾರಕ್ಕೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Spread the love

Leave a Reply

Your email address will not be published. Required fields are marked *