ನೆಲಮಂಗಲ: ಶಾಲಾ ವಾಹನಕ್ಕೆ ಸಿಲುಕಿ ಪ್ರಾ*ಬಿಟ್ಟ ಕಂದಮ್ಮ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಸನಪುರ ಸಮೀಪ ಶಾಲಾ ವಾಹನದಡಿ ಸಿಲುಕಿ ನಾಲ್ಕು ವರ್ಷದ ಬಾಲಕಿ ದಾರುಣವಾಗಿ ಮೃತಪಟ್ಟಿರುವ ಘಟನೆ ತೀವ್ರ ಆಘಾತ ಮೂಡಿಸಿದೆ. ಶಾಲಾ ವಾಹನವನ್ನು ರಿವರ್ಸ್ ತೆಗೆದುಕೊಳ್ಳುವ ವೇಳೆ ಸಂಭವಿಸಿದ ಈ ದುರ್ಘಟನೆಯಲ್ಲಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿ ಕೆಲಕಾಲ ಭಾವುಕ ವಾತಾವರಣ ನಿರ್ಮಾಣವಾಗಿತ್ತು.

ಮೃತ ಬಾಲಕಿಯನ್ನು ತನುಶಾ (4) ಎಂದು ಗುರುತಿಸಲಾಗಿದೆ. ಆಕೆ ತುಮಕೂರು ಜಿಲ್ಲೆಯ ಹೆಬ್ಬೂರು ನಿವಾಸಿಗಳಾದ ಕಿಶೋರ್ ಹಾಗೂ ಮಧುಸ್ಮಿತಾ ದಂಪತಿಯ ಎರಡನೇ ಪುತ್ರಿಯಾಗಿದ್ದಳು. ಕಿಶೋರ್ ಅವರು ಶಾಂತಿನಗರದ ಆರ್‌ಟಿಒ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕುಟುಂಬವು ಮಕ್ಕಳ ವಿದ್ಯಾಭ್ಯಾಸದ ನಿಮಿತ್ತ ನೆಲಮಂಗಲ ಭಾಗಕ್ಕೆ ಆಗಾಗ್ಗೆ ಸಂಚರಿಸುತ್ತಿತ್ತು ಎಂದು ತಿಳಿದುಬಂದಿದೆ.

ಮಾಹಿತಿಯ ಪ್ರಕಾರ, ಮಧ್ಯಾಹ್ನ ಕಿಶೋರ್ ಅವರು ತನುಶಾಳನ್ನು ಶಾಲೆಯಿಂದ ಮನೆಗೆ ಕರೆತಂದಿದ್ದರು. ಸಂಜೆ ವೇಳೆಗೆ ಹಿರಿಯ ಮಗಳು ಹನಿಕಾ ಶಾಲೆಯಿಂದ ಬರಬೇಕಿದ್ದ ಕಾರಣ ತಾಯಿ ಮಧುಸ್ಮಿತಾ ಆಕೆಯನ್ನು ಕರೆತರಲು ಶಾಲೆಯ ಬಳಿ ತೆರಳಿದ್ದರು. ಈ ವೇಳೆ ಚಿಕ್ಕ ಮಗಳು ತನುಶಾಳನ್ನೂ ತಮ್ಮೊಂದಿಗೆ ಕರೆದೊಯ್ದಿದ್ದರು. ಶಾಲೆಯ ಆವರಣದಲ್ಲಿ ತಾಯಿ ಹಿರಿಯ ಮಗಳನ್ನು ಕರೆತರುತ್ತಿದ್ದಾಗ, ತನುಶಾ ಅಲ್ಲೇ ಆಟವಾಡಲು ಆರಂಭಿಸಿದ್ದಾಳೆ.

ಅದೇ ಸಮಯದಲ್ಲಿ ಶಾಲಾ ಬಸ್ ಚಾಲಕ ವಾಹನವನ್ನು ರಿವರ್ಸ್ ತೆಗೆದುಕೊಳ್ಳುತ್ತಿದ್ದ ವೇಳೆ ಬಾಲಕಿ ವಾಹನದ ಮುಂಭಾಗದ ಚಕ್ರದಡಿ ಸಿಲುಕಿದ್ದಾಳೆ. ಚಾಲಕನಿಗೆ ಬಾಲಕಿ ಕಾಣಿಸದ ಕಾರಣ ವಾಹನ ಆಕೆಯ ಮೇಲೆ ಹರಿದಿದ್ದು, ಗಂಭೀರವಾಗಿ ಗಾಯಗೊಂಡ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಕ್ಷಣಾರ್ಧದಲ್ಲೇ ನಡೆದ ಈ ದುರ್ಘಟನೆ ತಾಯಿಯ ಕಣ್ಣೆದುರೇ ಸಂಭವಿಸಿದ್ದು, ಮಧುಸ್ಮಿತಾ ಅವರ ಆಕ್ರಂದನ ಸ್ಥಳದಲ್ಲಿದ್ದವರ ಕಣ್ಣೀರನ್ನು ತರಿಸಿತು.

ಘಟನೆಯ ನಂತರ ಶಾಲಾ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಇದರಿಂದ ಕುಟುಂಬಸ್ಥರು ಹಾಗೂ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ವಾಹನಗಳನ್ನು ಚಲಾಯಿಸುವ ವೇಳೆ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದು ಹಾಗೂ ಮಕ್ಕಳ ಸುರಕ್ಷತೆಯಲ್ಲಿ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಮಾದನಾಯಕನಹಳ್ಳಿ ಪೊಲೀಸರು ಹಾಗೂ ಚಿಕ್ಕಬಾಣಾವರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಶವಾಗಾರಕ್ಕೆ ರವಾನಿಸಲಾಗಿದ್ದು, ಅಪಘಾತಕ್ಕೀಡಾದ ವಾಹನ ಕಿಡ್ಸ್ ಇಂಟರ್‌ನ್ಯಾಷನಲ್ ಶಾಲೆಗೆ ಸೇರಿದ್ದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಚಾಲಕನ ಪತ್ತೆಗೆ ಶೋಧ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿ, ಸ್ಥಳೀಯರ ಹೇಳಿಕೆ ಹಾಗೂ ಶಾಲೆಯ ಸುರಕ್ಷತಾ ವ್ಯವಸ್ಥೆಗಳ ಕುರಿತು ತನಿಖೆ ನಡೆಸುತ್ತಿದ್ದಾರೆ. ಶಾಲಾ ಆಡಳಿತದ ನಿರ್ಲಕ್ಷ್ಯ ಅಥವಾ ಸುರಕ್ಷತಾ ನಿಯಮಗಳ ಉಲ್ಲಂಘನೆ ನಡೆದಿದೆಯೇ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

Spread the love

Leave a Reply

Your email address will not be published. Required fields are marked *