ಹೊಸಪೇಟೆ: ಮೈಸೂರು ದಸರಾ ಜಂಬೂಸವಾರಿ ಸಂದರ್ಭದಲ್ಲಿ ದಲಿತ ಸಚಿವರನ್ನು ತಡೆದು ಅವಮಾನಿಸಿದ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಮಾನತೆ ವೇದಿಕೆ ಪದಾಧಿಕಾರಿಗಳು ಹಾಗೂ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ತಹಸೀಲ್ದಾರ್ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು, ಸಚಿವರಾದ ಶಿವರಾಜ್ ತಂಗಡಗಿ, ನರೇಂದ್ರ ಸ್ವಾಮಿ ಹಾಗೂ ಕೆ.ಎಸ್. ಬಸವಂತಪ್ಪ ಅವರನ್ನು ಪೊಲೀಸ್ ಅಧಿಕಾರಿಯೊಬ್ಬರು ತಡೆದಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಅವರ ಮಧ್ಯಸ್ಥಿಕೆಯ ಬಳಿಕ ಪ್ರವೇಶಕ್ಕೆ ಅವಕಾಶ ನೀಡಲಾಯಿತು ಎಂಬ ಆರೋಪದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಚಿವರನ್ನು ಜಾತಿಯ ಆಧಾರದ ಮೇಲೆ ತಡೆದಿರುವುದು ಸಾಬೀತಾದರೆ, ಅದು ಸಂವಿಧಾನದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳಿಗೆ ವಿರುದ್ಧವಾದ ಕೃತ್ಯವಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು. ಸಂಬಂಧಪಟ್ಟ ಐಪಿಎಸ್ ಅಧಿಕಾರಿಯ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿ, ಆರೋಪ ಸಾಬೀತಾದಲ್ಲಿ ಕರ್ತವ್ಯದಿಂದ ವಜಾಗೊಳಿಸಬೇಕು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಲಿತ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ಬಳಿಕ ಹೊಸಪೇಟೆ ತಹಸೀಲ್ದಾರ್ ಅಮರನಾಥ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಾನತೆ ವೇದಿಕೆಯ ಸಂಚಾಲಕರಾದ ಎನ್. ವೆಂಕಟೇಶ್, ಭರತ್ ಕುಮಾರ್ ಸಿ.ಆರ್., ಎಚ್. ಶೇಷು, ವೈ. ರಾಮಚಂದ್ರ ಬಾಬು, ಗೋವಿಂದರಾಜ್, ಮಾಜಿ ನಗರಸಭಾ ಸದಸ್ಯರಾದ ರಾಜು, ಕರಿಯಪ್ಪ, ಜೆ.ಬಿ. ರಾಘವೇಂದ್ರ, ಕೊಲ್ಲಾಪುರಿ, ಹನುಮಂತ, ಉಮೇಶ್, ಶೇಕ್ ಮೆಹಬೂಬ್ ಬಾಷಾ, ಓಬಳೇಶ್, ಇಂತಿಯಾಜ್, ತಾಜುದ್ದೀನ್, ಅಲೆನ್ ಸುಹೇಲ್, ಎರಿಸ್ವಾಮಿ, ಈ. ಅನಿಲ್, ತಾಯಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
