ಮೂರು ದಿನಗಳಿಂದ ನಾಪತ್ತೆಯಾಗಿದ್ದ ‘ಮಜಾಭಾರತ’ ಕಲಾವಿದ ಶ*ವಾಗಿ ಪತ್ತೆ

ಬೀದರ್: ‘ಮಜಾಭಾರತ’ ಕಾಮಿಡಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಕಲಾವಿದರೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಣಕುಣಿ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಕಲಾವಿದರ ವಲಯದಲ್ಲಿ ಹಾಗೂ ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ.

ಮೃತರನ್ನು ಹುಮ್ನಾಬಾದ್ ನಗರದ ಟೀಚರ್ಸ್ ಕಾಲೊನಿ ನಿವಾಸಿ ಸಿದ್ದಾರ್ಥ ಪರಶನೂರ (36) ಎಂದು ಗುರುತಿಸಲಾಗಿದೆ. ಸಿದ್ದಾರ್ಥ ಅವರು ಜೂನ್ 13ರಂದು ಸ್ನೇಹಿತರೊಂದಿಗೆ ಮನೆಯಿಂದ ಹೊರಟಿದ್ದು, ಬಳಿಕ ಮನೆಗೆ ಮರಳಿರಲಿಲ್ಲ ಎಂದು ತಿಳಿದುಬಂದಿದೆ.

ಕುಟುಂಬ ಸದಸ್ಯರು ಅವರಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಮೂರು ದಿನಗಳಾದರೂ ಮನೆಗೆ ಬಾರದೆ ಇದ್ದ ಹಿನ್ನೆಲೆ, ಸೋಮವಾರ ಬೆಳಗ್ಗೆ ಕುಟುಂಬಸ್ಥರು ಹುಮ್ನಾಬಾದ್ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಲು ಮುಂದಾಗಿದ್ದರು.

ಈ ನಡುವೆಯೇ ಸೋಮವಾರ ಮಧ್ಯಾಹ್ನ ಹಣಕುಣಿ ರಸ್ತೆಯ ಸಮೀಪದ ಅರಣ್ಯ ಪ್ರದೇಶದಲ್ಲಿ ಸಿದ್ದಾರ್ಥ ಅವರ ಶವ ಪತ್ತೆಯಾಗಿದ್ದು, ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯರು ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಾಥಮಿಕ ತನಿಖೆಯ ಭಾಗವಾಗಿ ಮೊಬೈಲ್ ಟವರ್ ಲೊಕೆಶನ್ ಆಧರಿಸಿ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಸಿದ್ದಾರ್ಥ ಅವರ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದು ಸಹಜ ಸಾವೋ, ಆತ್ಮಹತ್ಯೆಯೋ ಅಥವಾ ಬೇರೆ ಯಾವುದೇ ಕಾರಣವೋ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಬಹಿರಂಗವಾಗುವ ಸಾಧ್ಯತೆ ಇದೆ.

ಈ ಸಂಬಂಧ ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.

ಜನಪ್ರಿಯ ಕಲಾವಿದನ ಅನುಮಾನಾಸ್ಪದ ಸಾವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಪೊಲೀಸರು ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಹೊರತರುವಂತೆ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

Spread the love

Leave a Reply

Your email address will not be published. Required fields are marked *