ಕೃಷ್ಣರಾಜಪೇಟೆ: ಮಂಡ್ಯ ಜಿಲ್ಲಾ ಪಂಚಾಯಿತಿಗೆ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಕ್ಷೇತ್ರದಿಂದ ತಮ್ಮ ಧರ್ಮಪತ್ನಿ ರುಕ್ಮಿಣಿ ಅವರನ್ನು ಚುನಾವಣಾ ಕಣಕ್ಕೆ ಇಳಿಸಲು ನಿರ್ಧರಿಸಿದ್ದು, ಕ್ಷೇತ್ರದ ಜನತೆ ಒಂದು ಅವಕಾಶ ನೀಡಿ ಸೇವೆ ಮಾಡಲು ಆಶೀರ್ವದಿಸಬೇಕು ಎಂದು ಯುವ ಮುಖಂಡ ಹಾಗೂ ಸಮಾಜ ಸೇವಕ ಬಸವನಹಳ್ಳಿ ದಿನೇಶ್ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಅಕ್ಕಿಹೆಬ್ಬಾಳು ಹೋಬಳಿಯ ಮುಖಂಡರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮಾಜ ಸೇವಕನಾಗಿ ಹಾಗೂ ಉದ್ಯಮಿಯಾಗಿ ಸಾವಿರಾರು ಯುವಜನರಿಗೆ ಉದ್ಯೋಗ ಕಲ್ಪಿಸುವ ಮೂಲಕ ಕೆಲಸ ಮಾಡುತ್ತಿದ್ದೇನೆ. ಇದೀಗ ಗ್ರಾಮೀಣ ಪ್ರದೇಶದ ರೈತಾಪಿ ವರ್ಗದ ಜನರ ಸೇವೆ ಮಾಡುವ ದೃಢ ಸಂಕಲ್ಪದೊಂದಿಗೆ ನನ್ನ ಧರ್ಮಪತ್ನಿ ರುಕ್ಮಿಣಿ ಅವರನ್ನು ಅಕ್ಕಿಹೆಬ್ಬಾಳು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.
ಗ್ರಾಮೀಣ ಭಾಗದ ಬಡವರು, ನೊಂದವರು, ತುಳಿತಕ್ಕೊಳಗಾದವರು ಹಾಗೂ ಅಸಹಾಯಕರಿಗೆ ನೆರವು ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವುದು ನಮ್ಮ ಉದ್ದೇಶವಾಗಿದೆ. ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಿಸುವ ಆಶಯದೊಂದಿಗೆ ಕ್ಷೇತ್ರದ ಜನರ ಸೇವೆ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.
ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಹೋಬಳಿಯ ಮತದಾರರ ಆಶಯದಂತೆ ಈಗಾಗಲೇ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜನರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಕ್ಷೇತ್ರದ ಜನರು ನನ್ನ ಧರ್ಮಪತ್ನಿ ರುಕ್ಮಿಣಿ ಅವರನ್ನು ಆಶೀರ್ವದಿಸಿ ಗೆಲ್ಲಿಸಿದರೆ, ಅಕ್ಕಿಹೆಬ್ಬಾಳು ಹೋಬಳಿಯನ್ನು ಮಂಡ್ಯ ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿ ತೋರಿಸುತ್ತೇನೆ ಎಂದು ಭರವಸೆ ನೀಡಿದರು.
ಹಣ ಹಾಗೂ ಆಸ್ತಿ ಸಂಪಾದಿಸುವ ಸಂಕುಚಿತ ಉದ್ದೇಶದಿಂದ ರಾಜಕೀಯ ಕ್ಷೇತ್ರಕ್ಕೆ ಬರುತ್ತಿಲ್ಲ. ಈಗಾಗಲೇ ನ್ಯಾಯಬದ್ಧವಾಗಿ ದುಡಿದು ಸಂಪಾದಿಸುತ್ತಿದ್ದು, ದುಡಿಮೆಯ ಅಲ್ಪ ಭಾಗವನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದೇನೆ. ಬಡವರು ಹಾಗೂ ದೀನದಲಿತರ ಸೇವೆಯಲ್ಲಿ ಭಗವಂತನನ್ನು ಕಾಣುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಬಸವನಹಳ್ಳಿ ದಿನೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅತಿಹೆಬ್ಬಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಆರ್. ವಾಸು, ಕೃಷ್ಣರಾಜಪೇಟೆ ತಾಲ್ಲೂಕು ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ಕುಮಾರ್, ನಾಯಕ ಸಮಾಜದ ಮುಖಂಡ ಶ್ರೀಧರ್, ರಾಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
