ಡ್ರಾಪ್‌ ಕೊಡುವ ನೆಪದಲ್ಲಿ ದೌರ್ಜ* ಕೃತ್ಯ – ಅ*ಚಾರ,ಕೊ* ಬೆದರಿಕೆಗೆ ಹೆದರಿ ಬೈಕ್‌ನಿಂದ ಜಿಗಿದ ಬಾಲಕಿ

ಹಾಸನ: ಕಾಲೇಜಿಗೆ ಡ್ರಾಪ್‌ ನೀಡುವ ನೆಪದಲ್ಲಿ ಪರಿಚಯಸ್ಥ ಅಪ್ರಾಪ್ತ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಆಘಾತಕಾರಿ ಘಟನೆ ಹಾಸನದಲ್ಲಿ ನಡೆದಿದೆ.

ಲಭ್ಯವಾದ ಮಾಹಿತಿಯ ಪ್ರಕಾರ, ಪದವಿ ಶಿಕ್ಷಣ ಪಡೆಯುತ್ತಿರುವ ಯುವಕನೊಬ್ಬ ತನ್ನ ಪರಿಚಯದ ಅಪ್ರಾಪ್ತ ಬಾಲಕಿಗೆ ಕಾಲೇಜಿಗೆ ಬಿಟ್ಟು ಬರುತ್ತೇನೆ ಎಂದು ಹೇಳಿ ಬೈಕ್‌ನಲ್ಲಿ ಕರೆದೊಯ್ದಿದ್ದಾನೆ. ಬಳಿಕ ಆಕೆಯನ್ನು ಜನ ಸಂಚಾರ ಕಡಿಮೆ ಇರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದೆ.

ಘಟನೆಯ ಬಳಿಕ ಬಾಲಕಿಯನ್ನು ಮರಳಿ ಕರೆದುಕೊಂಡು ಬರುತ್ತಿದ್ದ ವೇಳೆ, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಆರೋಪಿಯ ಬೆದರಿಕೆಯಿಂದ ಭಯಗೊಂಡ ಬಾಲಕಿ, ಬೈಕ್‌ನಲ್ಲಿ ಸಾಗುತ್ತಿದ್ದ ವೇಳೆ ಪ್ರಾಣ ರಕ್ಷಿಸಿಕೊಳ್ಳುವ ಉದ್ದೇಶದಿಂದ ಬೈಕ್‌ನಿಂದ ಜಿಗಿದಿದ್ದಾಳೆ.

ಬೈಕ್‌ನಿಂದ ಜಿಗಿದ ಪರಿಣಾಮ ಬಾಲಕಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿಯ ಹೇಳಿಕೆ ಹಾಗೂ ಪೋಷಕರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಪದವಿ ವ್ಯಾಸಂಗ ಮಾಡುತ್ತಿರುವುದರ ಜೊತೆಗೆ ಪಾನಿಪುರಿ ಅಂಗಡಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದಲ್ಲದೆ, ಈ ಕೃತ್ಯಕ್ಕೆ ಆರೋಪಿಗೆ ಸಹಕಾರ ನೀಡಿರುವ ಶಂಕೆ ಇರುವ ಇನ್ನಿಬ್ಬರು ಸ್ನೇಹಿತರಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಸೇರಿದಂತೆ ವಿವಿಧ ಕಾನೂನು ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Spread the love

Leave a Reply

Your email address will not be published. Required fields are marked *