ಅನೈ*ಕ ಸಂಬಂಧ ಪ್ರಶ್ನಿಸಿದ ಅಪ್ರಾಪ್ತ ಮಗನನ್ನು ಕೊ* ಮಾಡಿದ ತಾಯಿ

ಕರ್ನೂಲ್: ಅನೈತಿಕ ಸಂಬಂಧವನ್ನು ಪ್ರಶ್ನಿಸುತ್ತಿದ್ದ ತನ್ನ ಸ್ವಂತ ಮಗನನ್ನೇ ತಾಯಿ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವ ಬೆಚ್ಚಿಬೀಳಿಸುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಕೊಲೆ ಬಳಿಕ ಬಾಲಕನ ಮೃತದೇಹವನ್ನು ಸ್ಮಶಾನದಲ್ಲಿ ಹೂತು ಹಾಕಿ, ನಂತರ ಮಗ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದ ತಾಯಿ, ತನಿಖೆ ಚುರುಕುಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿರುವುದು ಪ್ರಕರಣಕ್ಕೆ ಮತ್ತಷ್ಟು ಸಂಚಲನ ತಂದಿದೆ.

ಮೃತ ಬಾಲಕನನ್ನು 15 ವರ್ಷದ ವೀರೇಂದ್ರ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ವೀರೇಂದ್ರನ ತಾಯಿ ಗಂಗಮ್ಮ ಹಾಗೂ ಆಕೆಯ ಪ್ರಿಯಕರ ದರ್ಗಪ್ಪರನ್ನು ಪ್ರಮುಖ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.

ತಾಯಿಯ ಸಂಬಂಧ ಪ್ರಶ್ನಿಸುತ್ತಿದ್ದ ಮಗ

ಪೊಲೀಸರ ಮಾಹಿತಿ ಪ್ರಕಾರ, ಗಂಗಮ್ಮ ಮತ್ತೋರ್ವ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಚಾರವನ್ನು ತಿಳಿದಿದ್ದ ವೀರೇಂದ್ರ, ಆಗಾಗ ತಾಯಿಯನ್ನು ಪ್ರಶ್ನಿಸುತ್ತಿದ್ದನು. ಮಾತ್ರವಲ್ಲದೆ ಸಂಬಂಧಿಕರು ಹಾಗೂ ಗ್ರಾಮಸ್ಥರ ಮುಂದೆಯೂ ಈ ವಿಷಯವನ್ನು ಹೇಳುತ್ತಿದ್ದ ಎನ್ನಲಾಗಿದೆ.

ತಮ್ಮ ಸಂಬಂಧ ಬಹಿರಂಗವಾಗುವ ಭಯದಿಂದ ಗಂಗಮ್ಮ ಹಾಗೂ ದರ್ಗಪ್ಪ ಬಾಲಕನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಕೊಲೆ ಬಳಿಕ ಸ್ಮಶಾನದಲ್ಲಿ ಹೂತು ಹಾಕಿದ ಆರೋಪ

ಯೋಜನೆಯಂತೆ ವೀರೇಂದ್ರನನ್ನು ಕೊಲೆ ಮಾಡಿದ ಬಳಿಕ, ಆರೋಪಿಗಳು ಮೃತದೇಹವನ್ನು ಗ್ರಾಮದ ಹೊರವಲಯದ ಸ್ಮಶಾನಕ್ಕೆ ಕೊಂಡೊಯ್ದು ರಹಸ್ಯವಾಗಿ ಹೂತು ಹಾಕಿದ್ದಾರೆ. ಬಳಿಕ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದ ಗಂಗಮ್ಮ ತನ್ನ ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಳು.

ಇದೇ ವೇಳೆ ಮಗನಿಗಾಗಿ ಹುಡುಕಾಟ ನಡೆಸುತ್ತಿರುವಂತೆ ವರ್ತಿಸಿದ್ದ ಆಕೆ, ತನಿಖೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಹೈಕೋರ್ಟ್ ಮೊರೆ ಹೋಗಿದ್ದಳು. ಮಗನ ಪತ್ತೆಗೆ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವನ್ನು ಕೋರಿದ್ದಳು.

SIT ತನಿಖೆಯಲ್ಲಿ ಬಯಲಾಯ್ತು ಸತ್ಯ

ಹೈಕೋರ್ಟ್ ಸೂಚನೆಯ ನಂತರ ವಿಶೇಷ ತನಿಖಾ ತಂಡ (SIT) ರಚಿಸಲಾಗಿತ್ತು. ತನಿಖೆ ವೇಳೆ ಪೊಲೀಸರು ಕರೆ ವಿವರಗಳು, ತಾಂತ್ರಿಕ ಸಾಕ್ಷ್ಯಗಳು ಹಾಗೂ ಸ್ಥಳೀಯರ ಮಾಹಿತಿಯನ್ನು ಸಂಗ್ರಹಿಸಿದರು. ಈ ವೇಳೆ ಗಂಗಮ್ಮ ಮೇಲೆಯೇ ಅನುಮಾನ ಮೂಡಿದ್ದು, ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣದ ಸತ್ಯಾಂಶ ಹೊರಬಂದಿದೆ.

ಸ್ಮಶಾನದಿಂದ ಹೊರತೆಗೆದ ಮೃತದೇಹ

ಆರೋಪಿಗಳ ಮಾಹಿತಿ ಆಧರಿಸಿ ಜೂನ್ 1ರಂದು ಅಧಿಕಾರಿಗಳು ಸ್ಮಶಾನದಲ್ಲಿ ಹೂತಿದ್ದ ವೀರೇಂದ್ರನ ಮೃತದೇಹವನ್ನು ಹೊರತೆಗೆದಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಪ್ರಕರಣ ಸಂಬಂಧ ಗಂಗಮ್ಮ ಹಾಗೂ ದರ್ಗಪ್ಪರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕನ ಹತ್ಯೆ, ಸಾಕ್ಷ್ಯ ನಾಶ ಹಾಗೂ ತನಿಖೆಯನ್ನು ದಿಕ್ಕು ತಪ್ಪಿಸುವ ಯತ್ನ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.

ಆಘಾತಕ್ಕೊಳಗಾದ ಸ್ಥಳೀಯರು

ಸ್ವಂತ ಮಗನನ್ನೇ ಕೊಲೆ ಮಾಡಿ, ಬಳಿಕ ನಾಪತ್ತೆ ನಾಟಕವಾಡಿ ನ್ಯಾಯಾಲಯದವರೆಗೂ ಹೋಗಿರುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹಾಗೂ ಹತ್ಯೆಯ ಹಿಂದಿನ ಇತರೆ ಅಂಶಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Spread the love

Leave a Reply

Your email address will not be published. Required fields are marked *