ಬೆಂಗಳೂರು: ಕಾಲೇಜಿನಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದ್ದೇವೆ ಎಂದು ಮನೆಯಲ್ಲಿ ಹೇಳಿ ಹೊರಟಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಧಾರುಣ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ ನಡೆದಿದೆ. ಈಜಲು ಹೋದ ಸಂದರ್ಭದಲ್ಲಿ ನೀರಿನ ಆಳದ ಅರಿವಿಲ್ಲದೆ ವಿದ್ಯಾರ್ಥಿ ಮುಳುಗಿ ಪ್ರಾಣ ಕಳೆದುಕೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯ ನಿವಾಸಿಗಳಾದ ವಿಶ್ವನಾಥ್ ಮತ್ತು ಭವ್ಯ ದಂಪತಿಯ ಪುತ್ರ ಹರ್ಷ (20) ಮೃತಪಟ್ಟ ದುರ್ದೈವಿ. ಸೋಮವಾರ ಬೆಳಗ್ಗೆ ಮನೆಯಲ್ಲಿ ದೇವರ ಪೂಜೆ ಮುಗಿಸಿದ ಹರ್ಷ, ತಮ್ಮ ಕಾಲೇಜಿನಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿರುವುದಾಗಿ ತಾಯಿಗೆ ತಿಳಿಸಿ ಮನೆಯಿಂದ ಹೊರಟಿದ್ದನು. ಆದರೆ ಕಾಲೇಜಿಗೆ ತೆರಳುವ ಬದಲು ಸ್ನೇಹಿತರೊಂದಿಗೆ ಹೆಸರಘಟ್ಟ ಕೆರೆಗೆ ಹೋಗಿದ್ದಾನೆ ಎನ್ನಲಾಗಿದೆ.
ಹೆಸರಘಟ್ಟ ಕೆರೆಗೆ ತೆರಳಿದ್ದ ಹರ್ಷ ಮತ್ತು ಆತನ ಸ್ನೇಹಿತರು ಈಜಲು ನೀರಿಗೆ ಇಳಿದಿದ್ದಾರೆ. ಈ ವೇಳೆ ಈಜು ಸರಿಯಾಗಿ ಬಾರದ ಹರ್ಷ ನೀರಿನಲ್ಲಿ ಆಯತಪ್ಪಿ ಆಳವಾದ ಭಾಗಕ್ಕೆ ತೆರಳಿ ಮುಳುಗಿದ್ದಾನೆ. ನೀರಿನಿಂದ ಮೇಲೆ ಬರಲು ಸಾಧ್ಯವಾಗದೆ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ನಡೆದ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಯ ಪೋಷಕರಿಗೆ ವಿಷಯ ತಿಳಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಕೆರೆಯಲ್ಲಿ ಶೋಧ ಕಾರ್ಯ ಆರಂಭಿಸಿದರೂ, ಹರ್ಷನನ್ನು ಪತ್ತೆಹಚ್ಚಲು ಪ್ರಯತ್ನ ಮುಂದುವರಿಸಬೇಕಾಯಿತು. ಬಳಿಕ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ನೆರವಿನಿಂದ ಕೆರೆಯಲ್ಲಿ ಶೋಧ ನಡೆಸಿ, ಹರ್ಷನ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇತ್ತ, ಕೈಯಾರೆ ಬೆಳೆಸಿದ ಮಗನನ್ನು ಕಳೆದುಕೊಂಡ ವಿಶ್ವನಾಥ್ ಮತ್ತು ಭವ್ಯ ದಂಪತಿಯ ದುಃಖ ಹೇಳತೀರದಾಗಿದೆ. ಕಾಲೇಜಿಗೆ ಹೋಗುವುದಾಗಿ ಮನೆಯಿಂದ ಹೊರಟಿದ್ದ ಮಗನ ಸಾವಿನ ಸುದ್ದಿ ಕುಟುಂಬಸ್ಥರಿಗೆ ಆಘಾತ ತಂದಿದ್ದು, ಕಾಮಾಕ್ಷಿಪಾಳ್ಯದ ನಿವಾಸದಲ್ಲಿ ಶೋಕದ ವಾತಾವರಣ ಆವರಿಸಿದೆ.
