ಜೈಪುರ: ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಭೋಂಡಾ ಗ್ರಾಮದಲ್ಲಿ ನಡೆದ ಭೀಕರ ಘರ್ಷಣೆಯಲ್ಲಿ ಬಿಜೆಪಿ ಮಾಜಿ ಶಾಸಕ ಅಟರ್ ಸಿಂಗ್ ಭದಾನಾ ಮೃತಪಟ್ಟಿದ್ದಾರೆ. ತಮ್ಮ ಗಣಿಗಾರಿಕೆ ಗುತ್ತಿಗೆ ಪ್ರದೇಶಕ್ಕೆ ತೆರಳಿದ್ದ ವೇಳೆ ನೂರಾರು ಗ್ರಾಮಸ್ಥರು ಬಡಿಗೆ ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ನಿನ್ನೆ ತಡರಾತ್ರಿ ಭೋಂಡಾ ಗ್ರಾಮದ ಸಮೀಪದ ಗಣಿಗಾರಿಕೆ ಪ್ರದೇಶಕ್ಕೆ ಭದಾನಾ ತೆರಳಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಅಲ್ಲಿ ಜಮಾಯಿಸಿದ್ದ ಗ್ರಾಮಸ್ಥರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಅವರ ಅಂಗರಕ್ಷಕ ಗಗನ್ ಶರ್ಮಾ ಕೂಡ ಗಾಯಗೊಂಡಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಭದಾನಾ ಅವರನ್ನು ಮೊದಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಬಳಿಕ ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಧ್ಯರಾತ್ರಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಹರಿಯಾಣ ಮೂಲದ ಭದಾನಾ ಅವರು ಭೋಂಡಾ ಗ್ರಾಮದ ಬೆಟ್ಟಗಳ ಸಮೀಪ ಗಣಿಗಾರಿಕೆ ಗುತ್ತಿಗೆ ಮತ್ತು ಕ್ರಷರ್ ಘಟಕ ಹೊಂದಿದ್ದರು. ಗಣಿಗಾರಿಕೆ ಗುತ್ತಿಗೆ ಅವರ ಪತ್ನಿ ಕಮಲೇಶ್ ಭದಾನಾ ಅವರ ಹೆಸರಿನಲ್ಲಿತ್ತು.

ಭೋಂಡಾ ಮತ್ತು ರಾಯ್‌ಪುರ ಗ್ರಾಮಗಳ ನಿವಾಸಿಗಳು ಗಣಿಗಾರಿಕೆ ಚಟುವಟಿಕೆ ಹಾಗೂ ಕ್ರಷರ್ ಘಟಕದ ವಿರುದ್ಧ ಕಳೆದ ಎರಡು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಹಲವು ಬಾರಿ ಧರಣಿ ನಡೆಸಿದ್ದ ಗ್ರಾಮಸ್ಥರು, ಗಣಿಗಾರಿಕೆ ಪ್ರದೇಶಕ್ಕೆ ತೆರಳುವ ರಸ್ತೆಯನ್ನೂ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿಯೇ ಘಟನೆ ನಡೆದಿರುವುದರಿಂದ ಹಲ್ಲೆಯ ನಿಖರ ಕಾರಣದ ಬಗ್ಗೆ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.

Spread the love

Leave a Reply

Your email address will not be published. Required fields are marked *