ಕೊಪ್ಪಳ: ಮನೆ ನಿರ್ಮಾಣಕ್ಕಾಗಿ ಮಾಡಿಕೊಂಡಿದ್ದ ಸಾಲ ಮನ್ನಾ ಆಗುತ್ತದೆ ಹಾಗೂ ಪತಿ ಮೃತಪಟ್ಟರೆ ವಿಮೆ ಹಣ ಕೈ ಸೇರುತ್ತದೆ ಎಂಬ ತಪ್ಪು ಮಾಹಿತಿಯನ್ನು ನಂಬಿ ಪತ್ನಿಯೇ ತನ್ನ ಪತಿಯ ಕೊಲೆಗೆ ಸಂಚು ರೂಪಿಸಿರುವ ಆಘಾತಕಾರಿ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮುಸ್ಟೂರು ಕ್ಯಾಂಪ್ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಸೇರಿದಂತೆ ಮೂವರು ಆರೋಪಿಗಳನ್ನು ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾರಟಗಿ ತಾಲೂಕಿನ ಮುಸ್ಟೂರು ಕ್ಯಾಂಪ್ ನಿವಾಸಿ ರಾಘವೇಂದ್ರ ಹನುಮಂತಪ್ಪ ಸಾಳುಂಕೆ (38) ಕೊಲೆಯಾದ ವ್ಯಕ್ತಿ. ಪ್ರಕರಣದಲ್ಲಿ ಮೃತನ ಪತ್ನಿ ಉಮಾ, ಆಕೆಯ ಸಂಬಂಧಿ ಶಿವಾಜಿ ಹಾಗೂ ಶಿವಾಜಿಯ ಸ್ನೇಹಿತ ಖಲೀಲ್ ಬಂಧಿತ ಆರೋಪಿಗಳಾಗಿದ್ದಾರೆ. ಮನೆ ನಿರ್ಮಾಣಕ್ಕೆ ಮಾಡಿಕೊಂಡಿದ್ದ ಸಾಲದ ಹೊರೆ ಮತ್ತು ವಿಮೆ ಹಣದ ಆಸೆ ಈ ಕೃತ್ಯಕ್ಕೆ ಕಾರಣವಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
18 ಲಕ್ಷ ರೂಪಾಯಿ ಸಾಲವೇ ಕೊಲೆಗೆ ಕಾರಣ?
ರಾಘವೇಂದ್ರ ಮತ್ತು ಉಮಾ ದಂಪತಿ ಮನೆ ನಿರ್ಮಾಣಕ್ಕಾಗಿ ವಿವಿಧ ಸ್ತ್ರೀಶಕ್ತಿ ಸಂಘಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಸುಮಾರು 18 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲದ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗದೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಈ ನಡುವೆ ಪತಿ ಮೃತಪಟ್ಟರೆ ವಿಮೆ ಹಣ ಸಿಗುತ್ತದೆ ಹಾಗೂ ಮನೆ ನಿರ್ಮಾಣಕ್ಕಾಗಿ ಮಾಡಿಕೊಂಡಿರುವ ಸಾಲ ಮನ್ನಾ ಆಗುತ್ತದೆ ಎಂಬ ತಪ್ಪು ಮಾಹಿತಿಯನ್ನು ಉಮಾ ನಂಬಿದ್ದಳು ಎನ್ನಲಾಗಿದೆ. ಈ ಆಲೋಚನೆಯಿಂದಲೇ ಪತಿಯ ಕೊಲೆಗೆ ಸಂಚು ರೂಪಿಸಿದ್ದಳು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಅನ್ನದಲ್ಲಿ ನಿದ್ರೆ ಮಾತ್ರೆ ಬೆರೆಸಿದ್ದ ಪತ್ನಿ
ಪತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಉಮಾ ಸುಮಾರು ಒಂದು ವಾರ ಅನ್ನದಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡಿದ್ದಳು ಎನ್ನಲಾಗಿದೆ. ಆದರೆ ಇದರಿಂದ ತನ್ನ ಉದ್ದೇಶ ಈಡೇರದ ಹಿನ್ನೆಲೆಯಲ್ಲಿ ಗಂಗಾವತಿಯಲ್ಲಿದ್ದ ಸಂಬಂಧಿ ಶಿವಾಜಿಯನ್ನು ಸಂಪರ್ಕಿಸಿದ್ದಳು. ಪತಿಯನ್ನು ಕೊಲೆ ಮಾಡಿದರೆ ಹೊಸ ಸ್ಕೂಟಿ ಕೊಡಿಸುವುದಾಗಿ ಆಮಿಷವೊಡ್ಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಉಮಾಳ ಮಾತಿಗೆ ಒಪ್ಪಿಕೊಂಡ ಶಿವಾಜಿ, ತನ್ನ ಸ್ನೇಹಿತ ಖಲೀಲ್ನನ್ನು ಕೂಡ ಕೃತ್ಯಕ್ಕೆ ಸೇರಿಸಿಕೊಂಡಿದ್ದ. ಬಳಿಕ ಮೂವರು ಸೇರಿ ರಾಘವೇಂದ್ರನ ಕೊಲೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ.
ಮಕ್ಕಳಿಗೂ ಜೀವ ಬೆದರಿಕೆ
ಅಕ್ಟೋಬರ್ 6ರ ರಾತ್ರಿ ಶಿವಾಜಿ ಮತ್ತು ಖಲೀಲ್ ಮುಸ್ಟೂರು ಕ್ಯಾಂಪ್ನಲ್ಲಿರುವ ರಾಘವೇಂದ್ರನ ಮನೆಗೆ ಬಂದಿದ್ದರು. ಮನೆಯಲ್ಲಿದ್ದ ಎಲ್ಲರೂ ಮಲಗಿದ ಬಳಿಕ ಮಧ್ಯರಾತ್ರಿ ಸುಮಾರು 12 ಗಂಟೆಗೆ ಉಮಾ ಮತ್ತು ಶಿವಾಜಿ ಸೇರಿ ನಿದ್ರೆಯಲ್ಲಿದ್ದ ರಾಘವೇಂದ್ರನ ಕುತ್ತಿಗೆಗೆ ಹಗ್ಗ ಬಿಗಿದು, ಕಟ್ಟಿಗೆಯಿಂದ ಮುಖಕ್ಕೆ ಹಲ್ಲೆ ನಡೆಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ತಂದೆಯ ಚೀರಾಟ ಕೇಳಿ ಎಚ್ಚರಗೊಂಡ ಮಕ್ಕಳಿಗೆ ಆರೋಪಿಗಳು ಜೀವ ಬೆದರಿಕೆ ಹಾಕಿ ಸುಮ್ಮನಿರಿಸಿದ್ದರು ಎನ್ನಲಾಗಿದೆ. ಹಲ್ಲೆಯ ಬಳಿಕವೂ ರಾಘವೇಂದ್ರ ಮೃತಪಟ್ಟಿರಲಿಲ್ಲ. ಹೀಗಾಗಿ ಆರೋಪಿಗಳು ಮುಂದಿನ ಕೃತ್ಯಕ್ಕೆ ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಂತೆ ಬಿಂಬಿಸಲು ಸಂಚು
ರಾಘವೇಂದ್ರನನ್ನು ಬೈಕ್ನಲ್ಲಿ ಕೂರಿಸಿಕೊಂಡ ಆರೋಪಿಗಳು, ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಹೆಬ್ಬಾಳ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ಅಲ್ಲಿ ಅಪಘಾತ ಸಂಭವಿಸಿದಂತೆ ಬಿಂಬಿಸುವ ಉದ್ದೇಶದಿಂದ ಆತನ ಬಾಯಿಗೆ ಕೀಟನಾಶಕ ಸುರಿದು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದರು ಎನ್ನಲಾಗಿದೆ.
ಮರುದಿನ ಬೆಳಗ್ಗೆ ಹೊಲಕ್ಕೆ ತೆರಳುತ್ತಿದ್ದ ರೈತರು ರಾಘವೇಂದ್ರ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪತ್ನಿ ಉಮಾ, ಅಪಘಾತ ಅಥವಾ ಫಿಟ್ಸ್ನಿಂದ ಘಟನೆ ಸಂಭವಿಸಿರಬಹುದು ಎಂದು ಹೇಳಿದ್ದಳು ಎಂದು ತಿಳಿದುಬಂದಿದೆ.
ಪ್ರಕರಣದ ತನಿಖೆ ಕೈಗೊಂಡ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಮೃತನ ಪತ್ನಿ ಉಮಾ, ಆಕೆಯ ಸಂಬಂಧಿ ಶಿವಾಜಿ ಹಾಗೂ ಶಿವಾಜಿಯ ಸ್ನೇಹಿತ ಖಲೀಲ್ನನ್ನು ಬಂಧಿಸಿದ್ದಾರೆ. ಮನೆ ಸಾಲ ಮತ್ತು ವಿಮೆ ಹಣದ ಆಸೆಗೆ ಪತಿಯ ಕೊಲೆಗೆ ಸಂಚು ರೂಪಿಸಿರುವ ಆರೋಪದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
