ಕೃಷ್ಣರಾಜಪೇಟೆ: ಕನ್ನಡ ಚಲನಚಿತ್ರರಂಗದ ನಗುವಿನ ಒಡೆಯ, ಸ್ನೇಹಜೀವಿ, ಹೃದಯವಂತ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಜೀವನದ ಆದರ್ಶಗಳು ಸಾರ್ವಕಾಲಿಕ ಸತ್ಯವಾಗಿದ್ದು, ಯುವಜನರು ಹಾಗೂ ವಿದ್ಯಾರ್ಥಿಗಳು ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಮುಖಿಯಾಗಿ ಹೆಜ್ಜೆ ಹಾಕುವ ಮೂಲಕ ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಕರೆ ನೀಡಿದರು.

ಪಟ್ಟಣದ ಎಂ.ಕೆ. ಬೊಮ್ಮೇಗೌಡ ವೃತ್ತದಲ್ಲಿ ಅಪ್ಪು ಯುವ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಐದನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವಿವಿಧ ಪೂಜಾ ಕೈಂಕರ್ಯಗಳು, ಅನ್ನಸಂತರ್ಪಣೆ, ಬೃಹತ್ ರಕ್ತದಾನ ಶಿಬಿರ ಹಾಗೂ ಅಪ್ಪು ಅಭಿಮಾನಿಗಳಿಗೆ ಉಚಿತವಾಗಿ ಅಪ್ಪು ಹೆಸರಿನ ಟ್ಯಾಟೂ ಹಾಕುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ನೊಂದವರು, ಬಡವರು ಹಾಗೂ ತುಳಿತಕ್ಕೊಳಗಾದವರಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಪುನೀತ್ ರಾಜಕುಮಾರ್ ಅವರು ಸಾರ್ಥಕ ಜೀವನ ನಡೆಸಿದ್ದಾರೆ. ಸಾವಿರಾರು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಿ, ಬಡಜನರ ಪಾಲಿಗೆ ಬೆಳಕಾಗಿದ್ದ ಅಪ್ಪು ಅವರು ಇಂದು ನಮ್ಮೊಂದಿಗಿಲ್ಲದಿದ್ದರೂ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಅಭಿಮಾನದಿಂದ ಸ್ಮರಿಸಿದರು.

ಹಣವಿದ್ದವರೆಲ್ಲರಿಗೂ ದಾನಧರ್ಮ ಮಾಡುವ ಮನಸ್ಸಿರುವುದಿಲ್ಲ. ಆದರೆ, ಪುನೀತ್ ರಾಜಕುಮಾರ್ ಅವರು ಬಲಗೈಯಲ್ಲಿ ಮಾಡಿದ ಸಹಾಯವನ್ನು ಎಡಗೈಗೂ ತಿಳಿಯದಂತೆ ಗೌಪ್ಯವಾಗಿ ಇಟ್ಟುಕೊಂಡು ಸಮಾಜದ ಉನ್ನತಿಗಾಗಿ ಕೊನೆಯ ಉಸಿರಿನವರೆಗೂ ಶ್ರಮಿಸಿದ್ದಾರೆ. ಅವರ ಆದರ್ಶಗಳು ಇಂದಿನ ಯುವಜನರು ಹಾಗೂ ಚುನಾಯಿತ ಜನಪ್ರತಿನಿಧಿಗಳಿಗೆ ಮಾದರಿಯಾಗಬೇಕು. ಅಪ್ಪು ಅವರ ಪುಣ್ಯಸ್ಮರಣೆಯ ಅಂಗವಾಗಿ ಸಮಾಜಕ್ಕೆ ಉಪಯುಕ್ತವಾದ ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಿರುವ ಅಪ್ಪು ಯುವ ಸಮಾಜ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕಾಮನಹಳ್ಳಿ ಕೆ.ಎಲ್. ಮಹೇಶ್ ಅವರ ಸಾಮಾಜಿಕ ಕಾಳಜಿ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜಸೇವಕ ಆರ್‌ಟಿಓ ಮಲ್ಲಿಕಾರ್ಜುನ್ ಅವರು ಅಪ್ಪು ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ಪೂಜೆ ನೆರವೇರಿಸುವ ಮೂಲಕ ಅನ್ನಸಂತರ್ಪಣೆಗೆ ಚಾಲನೆ ನೀಡಿದರು.

ಡಾರ್ಕ್ ಟ್ಯಾಟೂ ಹೊಸಹೊಳಲು ಕಿರಣ್ ಅವರ ನೇತೃತ್ವದಲ್ಲಿ ಅಪ್ಪು ಅಭಿಮಾನಿಗಳಿಗೆ ಉಚಿತವಾಗಿ ಅಪ್ಪು ಹೆಸರಿನ ಟ್ಯಾಟೂ ಹಾಕಲಾಯಿತು. ಸಮಾಜಸೇವಕ ಹಾಗೂ ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಬಿ. ಹರೀಶ್ ಸೇರಿದಂತೆ ನೂರಾರು ಯುವಕರು ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು.

ಇದೇ ಸಂದರ್ಭದಲ್ಲಿ ಶಿವಮ್ಮ ನರಸಿಂಹಮೂರ್ತಿ ಅವರ ಅಧ್ಯಕ್ಷತೆಯಲ್ಲಿ ರಿದ್ಧಿ ಫೌಂಡೇಶನ್ ಟ್ರಸ್ಟ್ (ರಿ.) ಅನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಭೂವರಹನಾಥ ಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸಂಚಾಲಕ ಡಾ. ಶ್ರೀನಿವಾಸ ರಾಘವನ್, ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಸೋಮಶೇಖರ್, ನಗರ ಘಟಕದ ಅಧ್ಯಕ್ಷ ಮದನ್, ಹಿರಿಯ ಪತ್ರಕರ್ತ ಕೆ.ಆರ್. ನೀಲಕಂಠ, ಟಿ.ವೈ. ಆನಂದ್, ಪುರಸಭೆ ಮಾಜಿ ಅಧ್ಯಕ್ಷೆ ಪಂಕಜ, ಬಳ್ಳೆಕೆರೆ ವಿಜಯಕುಮಾರ್, ತಾಲೂಕು ವಿತರಕರ ಸಂಘದ ಅಧ್ಯಕ್ಷ ಕೆ.ಎಸ್. ರಾಜೇಶ್, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಹೆಚ್.ಆರ್. ಲೋಕೇಶ್, ಡಿ. ಪ್ರೇಮ್ ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಸಿದ್ದರಾಜು, ಸುನಿಲ್ ಕುಮಾರ್, ಮಹೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಷ್ಮಾ, ರಿದ್ಧಿ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷೆ ಶಿವಮ್ಮ, ಜಾವೀಧ್, ಮಹಿಳಾ ಹೋರಾಟಗಾರ್ತಿಯರಾದ ರೋಜಾ ಮತ್ತು ಲತಾ, ಸ್ವೀಟ್ ರಾಮಣ್ಣ, ಆಟೋ ರಾಮಣ್ಣ, ಚಂದ್ರು, ಅನಿಲ್ ಶ್ರೀನಿಧಿ, ಗೋವಿಂದರಾಜು, ಪ್ರಜ್ವಲ್, ಅಶೋಕ್, ರಘು ಯಂಕ, ಹರೀಶ್ ಬೇಕರಿ, ಸತೀಶ್ ಸ್ವೀಟ್, ಪವಿತ್, ಪ್ರಭು ನಾಯಕ, ಲೋಕೇಶ್, ಶರತ್, ದಿಲೀಪ್, ರಾಜು, ಗೋಪಿ, ಅಜಯ್, ಜಗದೀಶ್, ಸಚ್ಚಿನ್, ದೇವರಾಜ್, ಸಂದೀಪ್. ಹೋಟೆಲ್ ಯೋಗೇಶ್ ಸೇರಿದಂತೆ ಸಾವಿರಾರು ಅಪ್ಪು ಅಭಿಮಾನಿಗಳು ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *