ಯಳಂದೂರು: ಚಾಮರಾಜನಗರದಲ್ಲಿ ಶನಿವಾರ ಹಾಗೂ ಭಾನುವಾರ ನಡೆಯಲಿರುವ ಬೌದ್ಧ ಮಹಾಸಮ್ಮೇಳನಕ್ಕೆ ಜಾತಿ ಧರ್ಮವನ್ನು ಮರೆತು ಎಲ್ಲರೂ ಭಾಗವಹಿಸಿ ಎಂದು ಕಾಂಗ್ರೆಸ್ ಮುಖಂಡ ಡಿ.ಎನ್. ನಟರಾಜು ಕರೆ ನೀಡಿದರು.
ಅವರು ತಾಲೂಕಿನ ಮೆಳ್ಳಹಳ್ಳಿ ಗೇಟ್ ಬಳಿ ಇರುವ ದಿ ಪ್ರಿನ್ಸ್ ಆರ್ಯ ಫ್ಯುಯಲ್ ಸ್ಟೇಷನ್ ಮುಂಭಾಗ ಇರುವ ಬುದ್ಧ ಮೂರ್ತಿಗೆ ಶುಕ್ರವಾರ ರಾತ್ರಿ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಭಗವಾನ್ ಬುದ್ಧರು ಕ್ರಿಸ್ತಪೂರ್ವದಲ್ಲೇ ಇಡೀ ವಿಶ್ವಕ್ಕೆ ಮಾನವೀಯತೆ ಸಂದೇಶವನ್ನು ಸಾರಿದ ಮಹಾನ್ ನಾಯಕರಾಗಿದ್ದರು. ವಿಶ್ವವು ಇಂದು ಭಾರತೀಯರನ್ನು ಬುದ್ಧನ ನಾಡಿನವರು ಎಂದು ಗುರುತಿಸುವುದು ಇದಕ್ಕೆ ಸಾಕ್ಷಿಯಾಗಿದ್ದು ಈ ಧರ್ಮದಲ್ಲಿ ಮಾನವೀಯತೆಯ ನೆಲೆಗಟ್ಟಿದೆ. ಇದಕ್ಕೆ ಯಾವುದೇ ಜಾತಿ, ಧರ್ಮದ ಸೋಂಕಿಲ್ಲ. ಪ್ರತಿಯೊಬ್ಬರೂ ಕೂಡ ಬೌದ್ಧ ಧರ್ಮದ ಅನುಯಾಯಿಗಳಾಗಬಹುದು. ಕಳೆದ ಬಾರಿ ಮೈಸೂರಿನಲ್ಲಿ ವಿಶ್ವ ಬೌದ್ಧ ಮಹಾಸಮ್ಮೇಳನ ನಡೆದಿತ್ತು. ಈ ಬಾರಿ ಇದನ್ನು ಚಾಮರಾಜನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗುತ್ತಿದ್ದು ಇದನ್ನು ಅವಿಸ್ಮರಣೀಯಗೊಳಿಸುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ಹಾಗಾಗಿ ಪ್ರತಿಯೊಬ್ಬರೂ ಶನಿವಾರ ಹಾಗೂ ಭಾನುವಾರ ತಪ್ಪದೆ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ತಾಪಂ ಮಾಜಿ ಸದಸ್ಯ ವೈ.ಕೆ.ಮೋಳೆ ನಾಗರಾಜು ಮಾತನಾಡಿ, ಬುದ್ಧ ಧರ್ಮ ಇಂದು ವಿಶ್ವಧರ್ಮವಾಗಿದೆ. ಬುದ್ಧನ ಅನುಯಾಯಿಗಳು ಎಲ್ಲ ದೇಶಗಳಲ್ಲೂ ಇದ್ದಾರೆ. ಇಲ್ಲಿರುವ ಮಾನವೀಯ ಮೌಲ್ಯಗಳನ್ನು ಕಂಡು ಬಾಬಾ ಸಾಹೇಬರು ತಮ್ಮ 5 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸೇರಿದ ಉದ್ದೇಶ ಇಲ್ಲಿರುವ ಉನ್ನತ ವಿಚಾರಗಳಿಗಾಗಿ. ವಿಶ್ವ ಬೌದ್ಧ ಮಹಾಸಮ್ಮೇಳನ ಈ ಬಾರಿ ಚಾಮರಾಜನಗರದಲ್ಲಿ ನಡೆಯುತ್ತಿದ್ದು ಇದರ ಅಂಗವಾಗಿ ಈ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮವನ್ನು ಡಿ.ಎನ್. ನಟರಾಜು ರೂಪಿಸಿರುವುದು ಶ್ಲಾಘನೀಯ ಎಂದರು.
ಬೌದ್ಧ ಉಪಾಸಕ ಮಹೇಶ್, ಪೃಥ್ವಿ, ಶಿಕ್ಷಕ ಶಾಂತಮೂರ್ತಿ, ಹೊನ್ನೂರುರಾಜೇಂದ್ರ ಮಾತನಾಡಿದರು. ಮುಖಂಡರಾದ ಕೆ. ಶಶಿಕಲಾ, ಆರ್ಯ ನಟರಾಜು, ಸಂತೋಷ್, ನಾಗರಾಜು, ಪರಶಿವಮೂರ್ತಿ, ಮಹದೇವಸ್ವಾಮಿ, ಹೊಂಗನೂರು ಮಹದೇವಸ್ವಾಮಿ, ಚಿಕ್ಕರಾಜಸ್ವಾಮಿ, ಶ್ರೀಕಂಠ, ಶಿವಪ್ರಸಾದ್, ಮನು, ಕಾರ್ತಿಕ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
