ಬೆಂಗಳೂರು, ಅ.8: 72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಕಾನು ವನ್ಯಜೀವಿ ಸಂರಕ್ಷಣಾ ಪ್ರತಿಷ್ಠಾನ, ಫಾರ್ಮರ್ಸ್ ಫಾರ್ ಫಾರೆಸ್ಟ್ ಸಂಘ ಹಾಗೂ ಬಿಜಿಎಸ್ ವಿದ್ಯಾಸಂಸ್ಥೆಯ ವತಿಯಿಂದ ಹೆಸರಘಟ್ಟ ಸಂರಕ್ಷಿತ ಅರಣ್ಯ ವಲಯದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು.
ಅಭಿಯಾನದಲ್ಲಿ ವಿದ್ಯಾರ್ಥಿಗಳು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಅರಣ್ಯ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಅರಣ್ಯ ಪ್ರದೇಶದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಬಾಟಲಿ ಸೇರಿದಂತೆ ವಿವಿಧ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ, ಅರಣ್ಯ ಪರಿಸರವನ್ನು ಸ್ವಚ್ಛವಾಗಿಡುವ ಸಂದೇಶ ಸಾರಲಾಯಿತು.
ಈ ಸಂದರ್ಭದಲ್ಲಿ ಕಾನು ವನ್ಯಜೀವಿ ಸಂರಕ್ಷಣಾ ಪ್ರತಿಷ್ಠಾನದ ಪ್ರಶಾಂತ್ ಗೋಪಿನಾಥ್ ಅವರು ವಿದ್ಯಾರ್ಥಿಗಳಿಗೆ ಸ್ವಚ್ಛತಾ ಅಭಿಯಾನದ ಜೊತೆಗೆ ವನ್ಯಜೀವಿ ಸಂರಕ್ಷಣೆ, ಅರಣ್ಯಗಳ ಮಹತ್ವ, ಪರಿಸರ ಸಮತೋಲನ, ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮ ಹಾಗೂ ಅರಣ್ಯ ಪ್ರದೇಶಗಳನ್ನು ಸಂರಕ್ಷಿಸುವಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಜವಾಬ್ದಾರಿಗಳ ಕುರಿತು ಮಾರ್ಗದರ್ಶನ ನೀಡಿದರು.
ವನ್ಯಜೀವಿ ಸಪ್ತಾಹದ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಹಾಗೂ ವನ್ಯಜೀವಿಗಳ ಬಗ್ಗೆ ಜವಾಬ್ದಾರಿಯುತ ಮನೋಭಾವ ಬೆಳೆಸುವ ಉದ್ದೇಶ ಹೊಂದಲಾಗಿದೆ. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಸರ್ಕಾರದ ಇಲಾಖೆಗಳ ಜವಾಬ್ದಾರಿಯಷ್ಟೇ ಅಲ್ಲದೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು.
ಹೆಸರಘಟ್ಟದಂತಹ ಪ್ರಮುಖ ಸಂರಕ್ಷಿತ ಅರಣ್ಯ ಪ್ರದೇಶಗಳ ಸ್ವಚ್ಛತೆ ಹಾಗೂ ಸಂರಕ್ಷಣೆಗೆ ನಿರಂತರವಾಗಿ ಸಾರ್ವಜನಿಕರ ಸಹಕಾರ ಅಗತ್ಯವಿದ್ದು, ಮುಂದಿನ ದಿನಗಳಲ್ಲಿಯೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ಕಾರ್ಯಕ್ರಮದಲ್ಲಿ ಒತ್ತಿ ಹೇಳಲಾಯಿತು.
ಈ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಬಿ ಎಫ್ ಓ ಹನುಮಂತರಾಜು, ಹರೀಶ್, ದೀಪಾ, ಅರಣ್ಯ ಸಂರಕ್ಷಕರಾದ ಶಶಾಂಕ್, ಮುನಿರಾಜು, ಬಿ ಜಿ ಏಸ್ ಸಂಸ್ಥೆಯ ವಿದ್ಯಾರ್ಥಿಗಳು, ಪ್ರಾoಶುಪಾಲರಾದ ರವಿಶಂಕರ್ ಮತ್ತು ಸಿಬ್ಬಂದಿಗಳು, ಕಾನು ವನ್ಯಜೀವಿ ಸಂರಕ್ಷಣಾ ಪ್ರತಿಷ್ಟಾನದ ಪ್ರಶಾಂತ್, ನಂದ, ಪ್ರಜ್ವಲ್, ಹಿತೇಶ್, ಫಾರ್ಮರ್ಸ್ ಫ಼ಾರ್ ಫಾರೆಸ್ಟ್ ತಂಡದಿಂದ ನವೀನ್, ಅತುಲ್ ವಿನೋದ್ ಭಾಗವಹಿಸಿದ್ದರು.

