ಪ್ರಿಯಕರನ ಜೊತೆ ಹೋಟೆಲ್‌ಗೆ ಹೋದ ಯುವತಿ ಹೆ* ವಾಗಿ ಪತ್ತೆ

digital varthe

ಹೈದರಾಬಾದ್: ಪ್ರಿಯಕರನೊಂದಿಗೆ ಹೋಟೆಲ್‌ಗೆ ತೆರಳಿದ್ದ ಯುವತಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಯುವತಿ ಸಾವಿನ ಬಳಿಕ ಆಕೆಯೊಂದಿಗೆ ಹೋಟೆಲ್‌ಗೆ ತೆರಳಿದ್ದ ಯುವಕ ನಾಪತ್ತೆಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ.

ಮೃತ ಯುವತಿಯನ್ನು ವಿಶಾಖಪಟ್ಟಣ ಮೂಲದ ಶರಾನ್ ನಿಖಿತಾ ಟೊಪ್ನೋ ಎಂದು ಗುರುತಿಸಲಾಗಿದೆ. ಆಕೆಯೊಂದಿಗೆ ಹೋಟೆಲ್‌ಗೆ ತೆರಳಿದ್ದ ಯುವಕನನ್ನು ಶ್ರೀನಿವಾಸ ರವಿ ತೇಜ ಎಂದು ಗುರುತಿಸಲಾಗಿದೆ. ಇಬ್ಬರೂ ಸೋಮವಾರ (ಸೆ.22) ಮಧ್ಯಾಹ್ನ ಹೈದರಾಬಾದ್‌ನ ಸಿದ್ದಿಕ್ ನಗರದಲ್ಲಿರುವ ಹೋಟೆಲ್‌ವೊಂದಕ್ಕೆ ತೆರಳಿ, ಒಂದೇ ಕೊಠಡಿಯನ್ನು ಪಡೆದುಕೊಂಡು ಚೆಕ್ ಇನ್ ಆಗಿದ್ದರು.

ಅದೇ ದಿನ ತಡರಾತ್ರಿ ಸುಮಾರು 1 ಗಂಟೆಯ ವೇಳೆಗೆ ಕೊಂಡಾಪುರದ ಖಾಸಗಿ ಆಸ್ಪತ್ರೆಯಿಂದ ಯುವತಿಯ ಸಾವಿನ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮಾಹಿತಿ ದೊರೆತ ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಯುವತಿಯ ತಲೆಯ ಭಾಗದಲ್ಲಿ ಗಾಯ ಹಾಗೂ ಊತ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಲ್ಲದೆ, ಹೋಟೆಲ್‌ನ ಕೊಠಡಿಯ ಗೋಡೆ ಹಾಗೂ ಬೆಡ್‌ಶೀಟ್‌ ಮೇಲೆ ರಕ್ತದ ಕಲೆಗಳು ಕಂಡುಬಂದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಹೀಗಾಗಿ ಯುವತಿಯ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಪೊಲೀಸರ ಪ್ರಕಾರ, ಯುವತಿಗೆ ತುರ್ತು ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ರವಿ ತೇಜ ಹಾಗೂ ಹೋಟೆಲ್ ಸಿಬ್ಬಂದಿ ಆಕೆಯನ್ನು ಕೊಂಡಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲೇ ಯುವತಿ ಮೃತಪಟ್ಟಿದ್ದಳು ಎನ್ನಲಾಗಿದೆ. ಬಳಿಕ ರವಿ ತೇಜ ಕೂಡ ಆಸ್ಪತ್ರೆಯಿಂದ ನಾಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದ ಬಳಿಕ ವಿಧಿವಿಜ್ಞಾನ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹೋಟೆಲ್ ಕೊಠಡಿಯಲ್ಲಿದ್ದ ವಿವಿಧ ಸಾಕ್ಷ್ಯಗಳು ಹಾಗೂ ರಕ್ತದ ಕಲೆಗಳ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಯುವತಿಯ ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಹಾಗೂ ವಿಧಿವಿಜ್ಞಾನ ಪರೀಕ್ಷೆಯ ಬಳಿಕ ಸ್ಪಷ್ಟವಾಗಬೇಕಿದೆ.

ಪ್ರಕರಣದಲ್ಲಿ ರವಿ ತೇಜ ಅವರ ಪಾತ್ರವಿದೆಯೇ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು, ನಾಪತ್ತೆಯಾಗಿರುವ ಯುವಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಹೋಟೆಲ್‌ನಲ್ಲಿ ಇಬ್ಬರು ತಂಗಿದ್ದ ಅವಧಿ, ಯುವತಿಯ ಸಾವಿಗೂ ಮುನ್ನ ನಡೆದ ಘಟನೆಗಳು ಹಾಗೂ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದ ಸಂದರ್ಭ ಸೇರಿದಂತೆ ಹಲವು ಅಂಶಗಳ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಸದ್ಯ ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಾದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ಯುವತಿಯ ಸಾವಿನ ನಿಜವಾದ ಕಾರಣ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆ ತನಿಖೆಯಿಂದ ಹೊರಬರಬೇಕಿದೆ.

Spread the love

Leave a Reply

Your email address will not be published. Required fields are marked *