ನೆಲಮಂಗಲ: ಮಿಲಿಟರಿ ಕ್ವಾಟ್ರಸ್ಗೆ ಅಗತ್ಯ ಸಾಮಗ್ರಿಗಳನ್ನು ತರಲು ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಿಐಎಸ್ಎಫ್ ಯೋಧನೊಬ್ಬ ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ನೆಲಮಂಗಲ ತಾಲೂಕಿನ ದಾಬಸ್ಪೇಟೆ ಸಮೀಪದ ಲಕ್ಕೂರು ಬಳಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ಯೋಧನನ್ನು ಪಂಜಾಬ್ ಮೂಲದ ಪ್ರಿನ್ಸಿಪಲ್ ಸಿಂಗ್ (35) ಎಂದು ಗುರುತಿಸಲಾಗಿದೆ. ಸಿಂಗ್ ಅವರು ದಾಬಸ್ಪೇಟೆಯಲ್ಲಿರುವ ಸಿಐಎಸ್ಎಫ್ ಕ್ವಾಟ್ರಸ್ನಲ್ಲಿ ವಾಸವಾಗಿದ್ದು, ಸಿಐಎಸ್ಎಫ್ನಲ್ಲಿ ಕಾನ್ಸ್ಟೇಬಲ್ ರ್ಯಾಂಕ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇಲಾಖೆಗೆ ಅಗತ್ಯವಿದ್ದ ಎಲೆಕ್ಟ್ರಿಕ್ ಸಾಮಗ್ರಿಗಳನ್ನು ತರಲು ಪ್ರಿನ್ಸಿಪಲ್ ಸಿಂಗ್ ಅವರು ಬೈಕ್ನಲ್ಲಿ ದಾಬಸ್ಪೇಟೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ಲಕ್ಕೂರು ಬಳಿ ಅವರ ಬೈಕ್ಗೆ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ನಿಂದ ರಸ್ತೆಗೆ ಬಿದ್ದ ಸಿಂಗ್ ಅವರು ಲಾರಿಯ ಚಕ್ರದಡಿ ಸಿಲುಕಿದ್ದಾರೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಯೋಧ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಕೂಡಲೇ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಪಘಾತದ ಮಾಹಿತಿ ತಿಳಿದ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪೊಲೀಸರು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿ ಅಪಘಾತಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲದ ಶವಗಾರಕ್ಕೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
