ಬೆಂಗಳೂರು: ಸುಮಾರು ₹673 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಎಸ್.ಎಂ. ಕೃಷ್ಣ ದಶಪಥ ರಸ್ತೆ ಕೇವಲ ನಾಲ್ಕು ತಿಂಗಳಲ್ಲೇ ಹದಗೆಟ್ಟಿರುವ ಆರೋಪ ಕೇಳಿಬಂದಿದೆ. ರಸ್ತೆಯಲ್ಲಿ ಬೃಹತ್ ಗುಂಡಿಗಳು ಕಾಣಿಸಿಕೊಂಡಿದ್ದು, ಡಾಂಬರು ಕಿತ್ತುಬಂದಿರುವುದು ವಾಹನ ಸವಾರರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಜೂನ್ 27ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಉದ್ಘಾಟನೆಗೊಂಡಿದ್ದ ಸುಮಾರು 10 ಕಿ.ಮೀ ಉದ್ದದ ಈ ರಸ್ತೆ, ಮಾಗಡಿ ರಸ್ತೆಯ ಕಡಬಗೆರೆಯಿಂದ ಮೈಸೂರು ರಸ್ತೆಯ ಚಲ್ಲಘಟ್ಟ ಮೆಟ್ರೋ ಡಿಪೋವರೆಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಕೆಲವೇ ತಿಂಗಳಲ್ಲಿ ರಸ್ತೆ ಹಾಳಾಗಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.


ಸೂರೇಕೆರೆ ಬಳಿ ಡಾಂಬರು ಕಿತ್ತುಬಂದಿದೆ


ಸೂರೇಕೆರೆ ಸಮೀಪ ರಸ್ತೆಯ ಡಾಂಬರು ಕಿತ್ತುಬಂದಿದ್ದು, ಜಲ್ಲಿಕಲ್ಲುಗಳು ಮೇಲೆದ್ದಿವೆ. ರಸ್ತೆ ನಿರ್ಮಾಣದ ವೇಳೆ ಅಡಿಪಾಯವನ್ನು ಸರಿಯಾಗಿ ಗಟ್ಟಿಗೊಳಿಸದಿರುವುದೇ ಈ ಸ್ಥಿತಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಳೆಯಿಂದ ರಸ್ತೆ ಮತ್ತಷ್ಟು ಹದಗೆಟ್ಟಿದ್ದು, ವಾಹನ ಸವಾರರು ಗುಂಡಿಗಳನ್ನು ತಪ್ಪಿಸಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ಸುರಂಗದಲ್ಲೂ ನೀರು ಸೋರಿಕೆ


ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಕೆಳಗಿನ ಸುರಂಗ ರಸ್ತೆಯಲ್ಲಿ ನಿರಂತರ ನೀರು ಸೋರಿಕೆಯಾಗುತ್ತಿದ್ದು, ಗೋಡೆಗಳ ಮೇಲೆ ಪಾಚಿ ಕಟ್ಟಿಕೊಂಡಿದೆ. ಸುರಂಗದೊಳಗೂ ದೊಡ್ಡ ಗುಂಡಿಗಳು ನಿರ್ಮಾಣವಾಗಿರುವುದರಿಂದ ವಾಹನ ಸವಾರರಿಗೆ ಅಪಾಯ ಎದುರಾಗಿದೆ. ಇದರ ಜತೆಗೆ ಬೀದಿ ದೀಪಗಳ ನಿರ್ವಹಣೆ ಮತ್ತು ರಸ್ತೆ ಬದಿಯ ಕಸ ವಿಲೇವಾರಿಯಲ್ಲಿನ ಸಮಸ್ಯೆಗಳೂ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿವೆ.


ಸಮಗ್ರ ತನಿಖೆಗೆ ಆಗ್ರಹ


ದಶಪಥ ರಸ್ತೆಯಲ್ಲಿ ವಾಹನಗಳು ವೇಗವಾಗಿ ಸಂಚರಿಸುವುದರಿಂದ ಗುಂಡಿಗಳಿಂದ ಅಪಘಾತ ಸಂಭವಿಸುವ ಆತಂಕ ಹೆಚ್ಚಾಗಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಜೀವಭಯದಲ್ಲೇ ಪ್ರಯಾಣಿಸುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಿದ ರಸ್ತೆ ಇಷ್ಟು ಬೇಗ ಹಾಳಾಗಲು ಕಾರಣವೇನು ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು. ಕಾಮಗಾರಿಯ ಗುಣಮಟ್ಟ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದರ ಜತೆಗೆ ರಸ್ತೆ ಗುಂಡಿಗಳನ್ನು ದುರಸ್ತಿಪಡಿಸಿ, ಸುರಂಗದ ನೀರು ಸೋರಿಕೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Spread the love

Leave a Reply

Your email address will not be published. Required fields are marked *