ಬೆಂಗಳೂರು: ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ, ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯು ಜಿಬಿಎ ಪೌರಕಾರ್ಮಿಕ ಮಹಿಳೆಯರಿಗಾಗಿ ಮೂರು ದಿನಗಳ ಉಚಿತ ಸ್ತನ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿತ್ತು. ಶಿಬಿರದಲ್ಲಿ ಸುಮಾರು 100 ಮಹಿಳೆಯರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.

ಮಹಿಳೆಯರಿಗೆ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಿ, ಮ್ಯಾಮೊಗ್ರಫಿ ತಪಾಸಣೆ ಹಾಗೂ ತಜ್ಞ ವೈದ್ಯರಿಂದ ಸಮಾಲೋಚನೆ ನೀಡಲಾಯಿತು. ಅಗತ್ಯವಿರುವವರಿಗೆ ಮುಂದಿನ ಚಿಕಿತ್ಸೆಯ ಬಗ್ಗೆಯೂ ಮಾರ್ಗದರ್ಶನ ಒದಗಿಸಲಾಯಿತು.

ಅಪೋಲೊ ಹಾಸ್ಪಿಟಲ್ಸ್ ಕರ್ನಾಟಕ ವಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಓಲೆಟಿ ಮಾತನಾಡಿ, ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪೌರಕಾರ್ಮಿಕರ ಆರೋಗ್ಯದ ಕಾಳಜಿಯಿಂದ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ, ಪೌರಕಾರ್ಮಿಕರು ಬೆಂಗಳೂರಿನ ಬೆನ್ನೆಲುಬಾಗಿದ್ದು, ಅವರ ಆರೋಗ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದರು. ಮಹಿಳೆಯರು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಹಾಗೂ ಸ್ತನ ಕ್ಯಾನ್ಸರ್‌ನ ಆರಂಭಿಕ ಪತ್ತೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಸ್ತನ ಆರೋಗ್ಯ ತಪಾಸಣೆಯು ವಯಸ್ಸು, ರೋಗಲಕ್ಷಣಗಳು ಮತ್ತು ಕುಟುಂಬದ ವೈದ್ಯಕೀಯ ಹಿನ್ನೆಲೆಯನ್ನು ಅವಲಂಬಿಸಿರುತ್ತದೆ ಎಂದು ಅಪೋಲೊ ಆಸ್ಪತ್ರೆಯ ವೈದ್ಯಕೀಯ ತಂಡ ತಿಳಿಸಿತು. ವರದಿಗಳ ಆಧಾರದ ಮೇಲೆ ಅಗತ್ಯವಿರುವವರಿಗೆ ಮುಂದಿನ ವೈದ್ಯಕೀಯ ಸಲಹೆ ನೀಡಲಾಯಿತು.

Spread the love

Leave a Reply

Your email address will not be published. Required fields are marked *