ಬೆಂಗಳೂರು: ಆನೇಕಲ್ ತಾಲೂಕಿನ ಬನ್ನೇರುಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ವರದನಹಳ್ಳಿಯಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ವೇಳೆ ನಿರ್ಮಿಸಲಾಗಿದ್ದ ಮಣ್ಣಿನ ರಸ್ತೆ ಕುಸಿದು ಲಾರಿಯೊಂದು ಕೆರೆಗೆ ಪಲ್ಟಿಯಾದ ಘಟನೆ ನಡೆದಿದೆ. ಲಾರಿ ಕೆರೆಗೆ ಉರುಳುತ್ತಿದ್ದಂತೆ ಚಾಲಕ ಸಮಯಪ್ರಜ್ಞೆ ಮೆರೆದು ವಾಹನದಿಂದ ಜಿಗಿದಿದ್ದು, ಅಪಾಯದಿಂದ ಪಾರಾಗಿದ್ದಾನೆ.

ಬಿಲ್ವರದನಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೊಳ್ಳಲಾಗಿದ್ದು, ಕೆರೆಯ ಏರಿಯ ಎರಡೂ ಬದಿಗಳಲ್ಲಿ ಮಣ್ಣು ಹಾಕಿ ರಸ್ತೆ ನಿರ್ಮಿಸಲಾಗಿತ್ತು. ಈ ಮಾರ್ಗದಲ್ಲಿ ಲಾರಿ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಮಣ್ಣು ಕುಸಿದಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಕೆರೆಯೊಳಗೆ ಪಲ್ಟಿಯಾಗಿದೆ. ಲಾರಿ ಉರುಳುತ್ತಿದ್ದಂತೆ ಚಾಲಕ ಹೊರಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆ ನಡೆದ ಬಳಿಕ ಸ್ಥಳೀಯರು ಕಾರ್ಯಾಚರಣೆ ನಡೆಸಿ, ಸುಮಾರು ಎರಡು ತಾಸುಗಳ ಕಾಲ ಹರಸಾಹಸ ಪಟ್ಟು ಕೆರೆಗೆ ಬಿದ್ದಿದ್ದ ಲಾರಿಯನ್ನು ಮೇಲಕ್ಕೆತ್ತಿದ್ದಾರೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದು, ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ.

ಕಂಪನಿಯೊಂದರ ಸಿಎಸ್‌ಆರ್ ಅನುದಾನದಡಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ಕೆರೆಯ ಬದಿಯಲ್ಲಿ ಮಣ್ಣನ್ನು ಅವೈಜ್ಞಾನಿಕವಾಗಿ ತುಂಬಿಸಿರುವುದರಿಂದ ರಸ್ತೆ ಕುಸಿಯುವ ಅಪಾಯ ಎದುರಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೆರೆಗೆ ಸೂಕ್ತ ತಡೆಗೋಡೆ ಇಲ್ಲದಿರುವುದರಿಂದ ವಾಹನಗಳು ಸಂಚರಿಸುವಾಗ ನಿಯಂತ್ರಣ ತಪ್ಪಿ ಕೆರೆಯತ್ತ ವಾಲುವ ಸಾಧ್ಯತೆಯೂ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೆರೆಯ ಅಭಿವೃದ್ಧಿ ಕಾಮಗಾರಿಯಲ್ಲಿ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಹಾಗೂ ಕೆರೆಯ ಬದಿಯಲ್ಲಿ ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Spread the love

Leave a Reply

Your email address will not be published. Required fields are marked *