ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ಕಟೌಟ್: ಕಳಪೆ ಕಾಮಗಾರಿ ಆರೋಪ

ಮೈಸೂರು: ನಗರದ ಗನ್ ಹೌಸ್ ವೃತ್ತದಲ್ಲಿ ಅಳವಡಿಸಲಾಗಿದ್ದ ದಸರಾ ದೀಪಾಲಂಕಾರದ ಬೃಹತ್ ಕಟೌಟ್ ಏಕಾಏಕಿ ಮುರಿದು ಬಿದ್ದ ಘಟನೆ ನಡೆದಿದೆ. ಕಟೌಟ್‌ವೊಂದು ರಸ್ತೆಯಲ್ಲಿ ಸಂಚರಿಸುತ್ತಿದ್ದ ಟಿಟಿ ವಾಹನದ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಸರಾ ಹಬ್ಬದ ಹಿನ್ನೆಲೆಯಲ್ಲಿ ಗನ್ ಹೌಸ್ ವೃತ್ತದಲ್ಲಿ ವಿದ್ಯುತ್ ದೀಪಾಲಂಕಾರಕ್ಕಾಗಿ ಬೃಹತ್ ಕಟೌಟ್ ಅಳವಡಿಸಲಾಗಿತ್ತು. ಆದರೆ ಕಟೌಟ್ ಅಳವಡಿಸಿದ ನಾಲ್ಕೇ ದಿನಗಳಲ್ಲಿ ಏಕಾಏಕಿ ಮುರಿದು ನೆಲಕ್ಕಪ್ಪಳಿಸಿದೆ. ಇದೇ ವೇಳೆ ಟಿಟಿ ವಾಹನ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಕಟೌಟ್ ವಾಹನದ ಮೇಲೆ ಬಿದ್ದಿದೆ.

ಕಟೌಟ್ ಬಿದ್ದ ರಭಸಕ್ಕೆ ವಾಹನಕ್ಕೆ ಹಾನಿಯಾಗಿದ್ದು, ಚಾಲಕನಿಗೆ ಯಾವುದೇ ಗಂಭೀರ ಗಾಯವಾಗಿಲ್ಲ ಎನ್ನಲಾಗಿದೆ. ಕಟೌಟ್ ಏಕಾಏಕಿ ವಾಹನದ ಮೇಲೆ ಬಿದ್ದಿದ್ದರಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಬೃಹತ್ ವಿದ್ಯುತ್ ದೀಪಾಲಂಕಾರದ ಕಟೌಟ್ ಅಳವಡಿಸುವ ಸಂದರ್ಭದಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಆರೋಪಿಸಲಾಗಿದೆ. ಕಟೌಟ್‌ಗಾಗಿ ಕೇವಲ ಅರ್ಧ ಅಡಿ ಗುಂಡಿ ತೆಗೆದು ಕಂಬ ಅಳವಡಿಸಲಾಗಿತ್ತು. ಇದರಿಂದ ಕಟೌಟ್‌ನ ಭಾರ ಹಾಗೂ ಗಾಳಿಯ ಒತ್ತಡವನ್ನು ತಡೆದುಕೊಳ್ಳಲಾಗದೆ ಕಂಬ ಮುರಿದು ಬಿದ್ದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಹಾಗೂ ದೀಪಾಲಂಕಾರದ ಗುತ್ತಿಗೆ ಪಡೆದಿರುವ ಮೋಹನ್ ಎಂಬುವವರ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಆರೋಪಗಳು ಕೇಳಿಬಂದಿವೆ. ದಸರಾ ಸಂದರ್ಭದಲ್ಲಿ ನಗರದ ಪ್ರಮುಖ ವೃತ್ತದಲ್ಲಿ ಇಂತಹ ಬೃಹತ್ ಕಟೌಟ್‌ಗಳನ್ನು ಅಳವಡಿಸುವಾಗ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿತ್ತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಟೌಟ್ ಅಳವಡಿಸಿದ ಕೆಲವೇ ದಿನಗಳಲ್ಲಿ ಈ ರೀತಿ ಮುರಿದು ಬಿದ್ದಿರುವುದು ದೀಪಾಲಂಕಾರದ ಗುಣಮಟ್ಟ ಹಾಗೂ ಅಳವಡಿಕೆಯ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ.

Spread the love

Leave a Reply

Your email address will not be published. Required fields are marked *