ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಎಷ್ಟೋ ಮದುವೆಗಳು ರದ್ದಾಗಿರುವ ಪ್ರಕರಣಗಳು ಬೆಳಕಿಗೆ ಬರುತ್ತದೆ. ಆದರೆ ಇಲ್ಲಿ ಇಬ್ಬರೂ ಸಹೋದರಿಯರಿಗೆ ಮದುವೆ ನಿಶ್ಚಯವಾಗಿತ್ತು. ಹುಡುಗಿಯರ ಕುಟುಂಬವು ಮದುವೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸಂಬಂಧಿಕರಿಗೂ ಕಾರ್ಡ್‌ಗಳನ್ನು ವಿತರಿಸಿದ್ದರು. ಆದರೆ ವಿವಾಹಕ್ಕೆ ಕೆಲವೇ ಕೆಲವು ದಿನ ಇರುವಾಗಲೇ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಇಬ್ಬರೂ ಸಹೋದರಿಯರು ತಮ್ಮ ಸಹೋದರರೊಂದಿಗೆ ಪರಾರಿಯಾಗಿದ್ದಾರೆ. ಹಾಗಾದ್ರೆ ಏನಿದು ಪ್ರಕರಣ? ಎನ್ನುವ ಮಾಹಿತಿ ಇಲ್ಲಿದೆ.
ಉತ್ತರ ಪ್ರದೇಶ, ಏಪ್ರಿಲ್ 16: ಮದುವೆ (marriage) ಮಂಟಪದಲ್ಲಿ ಮದುವೆ ಮುರಿದು ಬಿದ್ದಂತಹ ಘಟನೆಗಳು, ಮದುವೆ ಇಷ್ಟ ಇಲ್ಲದೇ ವಧು (bride) ಅಥವಾ ವರ (groom) ಪರಾರಿಯಾದ ಪ್ರಕರಣಗಳ ಬಗ್ಗೆ ಒಂದಷ್ಟು ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಅದರಲ್ಲಿಯೂ ಮನೆಯವರ ಬಲವಂತಕ್ಕೆ ಮದುವೆಗೆ ಒಪ್ಪಿ ಕೊನೆ ಕ್ಷಣದಲ್ಲಿ ಮದುವೆ ಮಂಟಪದಿಂದ ಎಸ್ಕೇಪ್ (escape) ಆಗುವ ಪ್ರಕರಣ ಗಳು ನಡೆಯುತ್ತಿರುತ್ತದೆ. ಆದರೆ ಇದೀಗ ಮದುವೆಗೆ ಎಂಟು ದಿನ ಇರುವಾಗಲೇ ಸಹೋದರಿ (sisters) ಯರಿಬ್ಬರೂ ಇಬ್ಬರು ಯುವಕರೊಂದಿಗೆ ಪರಾರಿಯಾದ ಘಟನೆಯೂ ಉತ್ತರ ಪ್ರದೇಶ (uttara pradesh) ದ ಗ್ರೇಟರ್ ನೋಯ್ಡಾ (greater noida) ದಲ್ಲಿ ನಡೆದಿದೆ.
ಹೌದು, ಮನೆಯಲ್ಲಿ ಗುರು ಹಿರಿಯರು ತಮ್ಮ ಇಬ್ಬರೂ ಪುತ್ರಿಯರಿಗೆ ಮದುವೆ ನಿಶ್ಚಯಿಸಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಬ್ಬರೂ ಸಹೋದರಿಯರು ಗುರು ಹಿರಿಯರು ನೋಡಿದ್ದ ವರರೊಂದಿಗೆ ಏಪ್ರಿಲ್ 14 ರಂದು ಮದುವೆಯಾಗಬೇಕಿತ್ತು. ವರರು ಇವರಿಗಿಂತ ವಯಸ್ಸಿನಲ್ಲಿ ದೊಡ್ಡವರಾಗಿದ್ದು, ಇವರಿಬ್ಬರಿಗೂ ಬೇರೆ ಯುವಕರ ಜೊತೆಗೆ ಪ್ರೇಮವಿತ್ತು. ಹೀಗಾಗಿ ಈ ಮದುವೆ ಇಬ್ಬರಿಗೂ ಇಷ್ಟವಿರಲಿಲ್ಲ. ಈ ಕಾರಣದಿಂದಾಗಿ ವಿವಾಹಕ್ಕೆ ಎಂಟು ದಿನ ಇರುವಾಗಲೇ ಇಬ್ಬರೂ ಪರಾರಿಯಾಗಿದ್ದಾರೆ. ಕುಟುಂಬಸ್ಥರು ಇಬ್ಬರೂ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂಭಾಲ್ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಇಬ್ಬರೂ ಸಹೋದರಿಯರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಅವರೊಂದಿಗೆ ಇಬ್ಬರೂ ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸಿದ ವೇಳೆ ಈ ಯುವತಿಯರು ತಮ್ಮ ಸೋದರ ಸಂಬಂಧಿಯ ಸಹೋದರರನ್ನು ಮದುವೆಯಾಗಿದ್ದಾರೆ ಎನ್ನುವುದು ವಿಚಾರ ತಿಳಿದು ಬಂದಿದೆ.
ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದು, ಈ ಇಬ್ಬರೂ ಸಹೋದರಿಯರು ತಾವು ಸಹೋದರರನ್ನು ದೇವಸ್ಥಾನದಲ್ಲಿ ಮದುವೆಯಾಗಿದ್ದೇವೆ. ಅವರೊಂದಿಗೆ ಇರಲು ಇಷ್ಟ ಪಡುತ್ತೇವೆ ಎಂದಿದ್ದಾರಂತೆ. ತಮ್ಮ ತಂದೆ ತಮ್ಮ ಮದುವೆಯನ್ನು ನಿಶ್ಚಯಿಸಿದ ಸ್ಥಳದ ಬಗ್ಗೆ ಪೊಲೀಸರಿಗೆ ತಿಳಿಸಿದ್ದು ಈ ಮದುವೆ ಇಷ್ಟವಿಲ್ಲದ ಕಾರಣ ಈ ರೀತಿ ಮಾಡಿದೆವು ಎಂದಿದ್ದಾರೆ. ಇನ್ನು ಮಂಗಳವಾರ ಇಬ್ಬರೂ ಯುವತಿಯರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸಾಕ್ಷ್ಯಗಳನ್ನು ಅಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.