ಹಾಸನ: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಆಲೂರು ತಾಲೂಕಿನ ಕಾರ್ಜುವಳ್ಳಿ ಗ್ರಾಮದ ಆಶಾ ಕಾರ್ಯಕರ್ತೆ ರೂಪ ಅವರಿಗೆ ಕುಟುಂಬದಲ್ಲಿ ಬರಸಿಡಿಲು ಬಡಿದಂತಾಗಿದೆ. ಪ್ರತಿಭಟನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಅವರ 21 ವರ್ಷದ ಮಗ ಸುಜಯ್ ರಸ್ತೆ ಅಪಘಾತದಲ್ಲಿ ಕೊನೆಗೊಂಡಿರುವ ದುರ್ಘಟನೆ ಸಂಭವಿಸಿದೆ.

ಬುಧವಾರ (ನ.25) ಸಂಜೆ ಲಕ್ಷ್ಮೀಪುರದ ಸಮೀಪ ಬೈಕ್ ಅಪಘಾತ ಸಂಭವಿಸಿದ್ದು, ಈ ಘಟನೆಯಲ್ಲಿ ಸುಜಯ್ ಮೃತಪಟ್ಟಿದ್ದಾನೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ತಾಯಿ ರೂಪ ಅವರಿಗೆ ಮಗನ ಸಾವಿನ ಸುದ್ದಿ ತಲುಪುತ್ತಿದ್ದಂತೆ ಆಘಾತಕ್ಕೊಳಗಾಗಿದ್ದಾರೆ. ವಿಷಯ ತಿಳಿದ ಕೂಡಲೇ ಅವರು ಪ್ರತಿಭಟನಾ ಸ್ಥಳದಿಂದ ಬೆಂಗಳೂರಿನಿಂದ ಆಲೂರಿಗೆ ವಾಪಸ್ಸಾಗಿದ್ದಾರೆ.

ಮಗನನ್ನು ಕಳೆದುಕೊಂಡ ರೂಪ ಹಾಗೂ ಕುಟುಂಬಸ್ಥರ ದುಃಖ ಹೇಳತೀರದಂತಾಗಿದೆ. ಕುಟುಂಬದ ಆಧಾರವಾಗಿದ್ದ ಯುವಕನ ಅಕಾಲಿಕ ಸಾವು ಮನೆಯವರನ್ನು ತೀವ್ರ ಶೋಕಸಾಗರದಲ್ಲಿ ಮುಳುಗಿಸಿದೆ. ಸುಜಯ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಾರ್ಜುವಳ್ಳಿ ಗ್ರಾಮದಲ್ಲಿಯೂ ದುಃಖದ ವಾತಾವರಣ ನಿರ್ಮಾಣವಾಗಿದೆ.

ಮೃತ ಸುಜಯ್‌ನ ಮೃತದೇಹವನ್ನು ಆಲೂರು ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳಿಗೆ ಸಿದ್ಧತೆ ಕೈಗೊಳ್ಳಲಾಗಿದೆ. ಲಕ್ಷ್ಮೀಪುರದ ಸಮೀಪ ಸಂಭವಿಸಿದ ಈ ಅಪಘಾತವು ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

Spread the love

Leave a Reply

Your email address will not be published. Required fields are marked *