ಬೆಂಗಳೂರು: ಚಿಕ್ಕಮ್ಮನ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೈಕ್ನಲ್ಲಿ ತೆರಳುತ್ತಿದ್ದ ಯುವಕನೊಬ್ಬ ಹಿಟ್ ಅಂಡ್ ರನ್ ಅಪಘಾತದಲ್ಲಿ ಕೊನೆಗೊಂಡಿರುವ ದುರ್ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಸಮೀಪ ಭಾನುವಾರ ರಾತ್ರಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ವಾಸವಾಗಿದ್ದ ಕೃಷ್ಣ (25) ಮೃತಪಟ್ಟ ಯುವಕ. ಇತ್ತೀಚೆಗಷ್ಟೇ ಕಾವೇರಿ ಎಂಬ ಯುವತಿಯನ್ನು ವಿವಾಹವಾಗಿದ್ದ ಕೃಷ್ಣ, ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಸೋಮವಾರ ಬೆಳಿಗ್ಗೆ ನಡೆಯಬೇಕಿದ್ದ ಚಿಕ್ಕಮ್ಮನ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ.
ಭಾನುವಾರ ರಾತ್ರಿ ಸುಮಾರು 12 ಗಂಟೆಯ ವೇಳೆಗೆ ತ್ಯಾಮಗೊಂಡ್ಲು ಸಮೀಪ ಸಾಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕೃಷ್ಣ ಕೊನೆಯುಸಿರು ಹೇಳಿದಿದ್ದು, ಅಪಘಾತ ಎಸಗಿದ ವಾಹನ ನಿಲ್ಲಿಸದೆ ಸ್ಥಳದಿಂದ ತೆರಳಿದೆ ಎನ್ನಲಾಗಿದೆ. ಹೀಗಾಗಿ ಘಟನೆ ಹಿಟ್ ಅಂಡ್ ರನ್ ಪ್ರಕರಣವಾಗಿ ದಾಖಲಾಗಿದೆ.
ಮದುವೆ ಸಂಭ್ರಮದಲ್ಲಿ ಭಾಗವಹಿಸಲು ಹೊರಟಿದ್ದ ಯುವಕ ದಾರಿಮಧ್ಯೆಯೇ ಹಸುನಿಗಿರುವ ಕುಟುಂಬಸ್ಥರು ಹಾಗೂ ಪರಿಚಿತರಲ್ಲಿ ಆಘಾತ ಮೂಡಿಸಿದೆ. ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಕೃಷ್ಣನ ಸಾವಿನಿಂದ ಕುಟುಂಬದಲ್ಲಿ ದುಃಖದ ಛಾಯೆ ಆವರಿಸಿದೆ.
ಘಟನೆ ಮಾಹಿತಿ ತಿಳಿದ ತ್ಯಾಮಗೊಂಡ್ಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ನೆಲಮಂಗಲದ ಶವಾಗಾರಕ್ಕೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತಕ್ಕೆ ಕಾರಣವಾದ ವಾಹನ ಮತ್ತು ಅದರ ಚಾಲಕನ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
