ಕೃಷ್ಣರಾಜಪೇಟೆ: ಪಟ್ಟಣದ ವಕೀಲರ ಸಂಘದಲ್ಲಿ ಸಭೆ ನಡೆಸಿದ ಬಳಿಕ ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು, ಪಟ್ಟಣದ ಎಂ.ಕೆ. ಬೊಮ್ಮೇಗೌಡ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ವಕೀಲರ ಮೇಲಿನ ನಿರಂತರ ದೌರ್ಜನ್ಯ ಹಾಗೂ ಹಲ್ಲೆಗಳನ್ನು ತೀವ್ರವಾಗಿ ಖಂಡಿಸಿ, ವಕೀಲರ ಹಿತರಕ್ಷಣಾ ಕಾಯಿದೆಯನ್ನು ಕೂಡಲೇ ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎಂ.ಆರ್. ನಾಗೇಗೌಡ ಅವರು, ರಾಜ್ಯದ ಪ್ರತಿಯೊಂದು ಭಾಗದಲ್ಲಿಯೂ ವಕೀಲರು ಪರಸ್ಪರ ಸಮನ್ವಯದೊಂದಿಗೆ ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದಾರೆ. ನಮ್ಮ ವೃತ್ತಿ ಒಂದೇ, ಗುರುತು ಒಂದೇ ಹಾಗೂ ವಕೀಲ ಸಮುದಾಯವೇ ನಮ್ಮ ಕುಟುಂಬವಾಗಿದೆ. ಈ ಹೋರಾಟದಲ್ಲಿ ಯಾವುದೇ ರಾಜಕೀಯ, ವೈಯಕ್ತಿಕ ಹಿತಾಸಕ್ತಿ ಅಥವಾ ಸಂಘಟನಾತ್ಮಕ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಎಲ್ಲರೂ ಒಂದಾಗಿ ಹೋರಾಡಬೇಕಿದೆ ಎಂದರು.

ವಕೀಲರ ಗೌರವ, ಘನತೆ, ಸ್ವಾಭಿಮಾನ, ಸುರಕ್ಷತೆ ಮತ್ತು ವೃತ್ತಿಪರ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸಾಧ್ಯವಿಲ್ಲ. ಒಬ್ಬ ವಕೀಲನಿಗೆ ಅನ್ಯಾಯವಾದಾಗ ಇಡೀ ವಕೀಲ ಸಮುದಾಯ ಆತನ ಬೆನ್ನಿಗೆ ನಿಲ್ಲಬೇಕು. ನಮ್ಮಲ್ಲಿ ಒಗ್ಗಟ್ಟು, ಸಂಘಟಿತ ಶಕ್ತಿ ಮತ್ತು ಪರಸ್ಪರ ಸಹಕಾರವಿದ್ದಾಗ ಮಾತ್ರ ನಮ್ಮ ಧ್ವನಿಗೆ ನಿಜವಾದ ಬಲ ದೊರೆಯುತ್ತದೆ. ಈ ಪ್ರತಿಭಟನೆಯ ಮೂಲಕ ಸರ್ಕಾರ, ಸಮಾಜ ಹಾಗೂ ನ್ಯಾಯಾಂಗಕ್ಕೆ ಸ್ಪಷ್ಟ ಸಂದೇಶ ನೀಡಬೇಕಾಗಿದೆ ಎಂದು ತಿಳಿಸಿದರು.

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ವಕೀಲರಿಗೆ ಬೆಂಬಲ ಸೂಚಿಸಿದ ಶಾಸಕ ಎಚ್.ಟಿ. ಮಂಜು ಮಾತನಾಡಿ ವಕೀಲರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯ ಹಾಗೂ ಹಲ್ಲೆಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಕೀಲರ ರಕ್ಷಣೆಗಾಗಿ ಸೂಕ್ತವಾದ ಕಠಿಣ ಕಾನೂನು ವ್ಯವಸ್ಥೆ ಜಾರಿಯಾಗಬೇಕು. ಈ ಕುರಿತು ವಿಧಾನಸಭೆಯ ಕಲಾಪದಲ್ಲಿ ಚರ್ಚಿಸಿ ವಕೀಲರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಆರ್. ನಾಗೇಗೌಡ, ಉಪಾಧ್ಯಕ್ಷ ಪುರುಷೋತ್ತಮ, ಕಾರ್ಯದರ್ಶಿ ಎಸ್.ಜೆ. ಮಂಜೇಗೌಡ, ಜಂಟಿ ಕಾರ್ಯದರ್ಶಿ, ಖಜಾಂಚಿ ಪ್ರಸನ್ನ, ದೊಡ್ಡಯ್ಯ, ಹಿರಿಯ ವಕೀಲರಾದ ಜಿ.ಆರ್. ಅನಂತರಾಮಯ್ಯ, ಎಂ.ಆರ್. ಪ್ರಸನ್ನಕುಮಾರ್, ಶಿವರಾಂ, ಕೆ.ಎನ್. ನಾಗರಾಜು, ನಿರಂಜನ್, ಎಸ್.ಆರ್. ನವೀನ್ ಕುಮಾರ್, ಎಸ್. ಸತೀಶ್, ಎನ್. ಮಂಜುನಾಥ್, ಜಿ.ಕೆ. ಸತೀಶ್, ಸುಪ್ರೀತಾ ಯು., ಪಿ.ಬಿ. ಮಂಜುನಾಥ್, ಕೆ.ಟಿ. ವಿಶ್ವನಾಥ್, ಜಿ.ವಿ. ಜಗದೀಶ್, ನಾರ್ಗೋನಹಳ್ಳಿ ಜಗದೀಶ್, ತೆಂಗಿನಘಟ್ಟ ಜಗದೀಶ್, ಶಿವಕುಮಾರ್, ಯೋಗೇಶ್, ಅನ್ವೇಶ್, ಬಿ.ಸಿ. ಹರ್ಷ, ಬಿ.ಎನ್. ಸತೀಶ್, ರಾಣಿ, ರಶ್ಮಿ, ಭಾವನಾ ಸೇರಿದಂತೆ ನೂರಾರು ವಕೀಲರು ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *