ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧವನ್ನು ಸ್ಫೋಟಿಸಿದಂತೆ ಕೃತಕ ಬುದ್ಧಿಮತ್ತೆ ಬಳಸಿ ನಕಲಿ ರೀಲ್ಸ್ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಬಿಹಾರ ಮೂಲದ ಯುವಕ ಹಜರತ್ ಅಲಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ರಾಜಧಾನಿಯಲ್ಲಿ ಸಂಚಲನ ಮೂಡಿಸಿದೆ.
ಜೆ.ಸಿ. ರಸ್ತೆಯ ಪೈಪ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಜರತ್ ಅಲಿ, ವಿಧಾನಸೌಧದ ಮುಂದೆ ತೆಗೆದಿದ್ದ ತನ್ನ ಫೋಟೋಗಳನ್ನು ಬಳಸಿಕೊಂಡು ಸ್ಫೋಟದ ದೃಶ್ಯಗಳಿರುವಂತೆ ನಕಲಿ ವಿಡಿಯೋ ಸೃಷ್ಟಿಸಿದ್ದಾನೆ ಎನ್ನಲಾಗಿದೆ. ಬಳಿಕ ಈ ರೀಲ್ಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗುತ್ತಿದ್ದಂತೆ ಪೊಲೀಸರ ಗಮನಕ್ಕೆ ಬಂದಿದೆ.
ವಿಧಾನಸೌಧದಂತಹ ಪ್ರಮುಖ ಸರ್ಕಾರಿ ಕಟ್ಟಡದ ಬಗ್ಗೆ ಸ್ಫೋಟದ ದೃಶ್ಯಗಳನ್ನು ಸೃಷ್ಟಿಸಿರುವುದು ಭದ್ರತಾ ದೃಷ್ಟಿಯಿಂದ ಆತಂಕಕ್ಕೆ ಕಾರಣವಾಗಿದೆ. ಮಾಹಿತಿ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹಜರತ್ ಅಲಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಕೃತ್ಯದ ಹಿಂದಿನ ಉದ್ದೇಶದ ಬಗ್ಗೆ ತನಿಖೆ
ಸದ್ಯ ಹಜರತ್ ಅಲಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ವಿಡಿಯೋ ಸೃಷ್ಟಿಸಿದ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಆತ ಈ ಕೃತ್ಯವನ್ನು ಅದರ ಗಂಭೀರತೆ ಅರಿಯದೆ ಮಾಡಿದ್ದಾನೆಯೇ ಅಥವಾ ಬೇರೆ ಯಾವುದಾದರೂ ದುರುದ್ದೇಶವಿತ್ತೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ನೈಜ ಘಟನೆಯಂತೆ ಕಾಣುವ ನಕಲಿ ವಿಡಿಯೋಗಳನ್ನು ಸೃಷ್ಟಿಸುವುದರಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗುವ ಸಾಧ್ಯತೆಯಿದ್ದು, ಇಂತಹ ದೃಶ್ಯಗಳನ್ನು ಪರಿಶೀಲಿಸದೆ ಹಂಚಿಕೊಳ್ಳದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ.
