ಚಿಕ್ಕಬಳ್ಳಾಪುರ: ಜಮೀನಿನಲ್ಲಿದ್ದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದ ತಾತ ಹಾಗೂ ಇಬ್ಬರು ಮೊಮ್ಮಕ್ಕಳು ಕೃಷಿ ಹೊಂಡದಲ್ಲಿ ಶ*ವಾಗಿ ಪತ್ತೆಯಾಗಿರುವ ಘಟನೆ ಚಿಂತಾಮಣಿ ತಾಲೂಕಿನ ಹುಸೇನಪುರ ಗ್ರಾಮದಲ್ಲಿ ನಡೆದಿದೆ. ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಗ್ರಾಮದಲ್ಲಿ ಆತಂಕ ಹಾಗೂ ದುಃಖಕ್ಕೆ ಕಾರಣವಾಗಿದೆ.

ಹುಸೇನಪುರ ಗ್ರಾಮದ ನಿವಾಸಿ ಮುನಿನಾರಾಯಣಪ್ಪ (60) ಹಾಗೂ ಅವರ ಮೊಮ್ಮಕ್ಕಳಾದ ಯಶ್ವಿನ್ ಮತ್ತು ಪ್ರಜ್ವಲ್ ಮೃತರು. ಮುನಿನಾರಾಯಣಪ್ಪ ಅವರು ಪ್ರತಿ ಶನಿವಾರ ತಮ್ಮ ಜಮೀನಿನಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಶನಿವಾರ ಬೆಳಗ್ಗೆ ಎಂದಿನಂತೆ ಪೂಜೆಗಾಗಿ ಜಮೀನಿಗೆ ತೆರಳುವಾಗ ಮೊಮ್ಮಕ್ಕಳಾದ ಯಶ್ವಿನ್ ಮತ್ತು ಪ್ರಜ್ವಲ್ ಕೂಡ ಅವರೊಂದಿಗೆ ಹೋಗಿದ್ದರು.

ಬೆಳಗ್ಗೆ ಸುಮಾರು 9ರಿಂದ 10 ಗಂಟೆ ವೇಳೆಗೆ ಮನೆಯಿಂದ ತೆರಳಿದ್ದ ಮೂವರು ಸಂಜೆಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಜಮೀನಿನತ್ತ ತೆರಳಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ದೇವಾಲಯದ ಸಮೀಪದಲ್ಲಿರುವ ಅಶ್ವತ್ಥಪ್ಪ ಎಂಬುವರ ಜಮೀನಿನ ಕೃಷಿ ಹೊಂಡದಲ್ಲಿ ಮೂವರ ಶ*ಗಳು ಪತ್ತೆಯಾಗಿವೆ.

ಮಕ್ಕಳು ಆಟವಾಡುತ್ತಾ ಅಥವಾ ನೀರು ತರಲು ಕೃಷಿ ಹೊಂಡದ ಬಳಿ ತೆರಳಿದ ಸಂದರ್ಭದಲ್ಲಿ ಕಾಲುಜಾರಿ ನೀರಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಅವರನ್ನು ರಕ್ಷಿಸಲು ಹೋದ ಮುನಿನಾರಾಯಣಪ್ಪ ಕೂಡ ನೀರಿಗೆ ಬಿದ್ದಿರಬಹುದು ಎನ್ನಲಾಗಿದೆ. ಇದೇ ವೇಳೆ ಕೃಷಿ ಹೊಂಡದ ಸಮೀಪ ವಿದ್ಯುತ್ ತಂತಿಗಳು ಹಾಗೂ ಪಂಪ್‌ಸೆಟ್ ಸಂಪರ್ಕವಿರುವುದರಿಂದ ವಿದ್ಯುತ್ ಸ್ಪರ್ಶದಿಂದ ಅವಘಡ ಸಂಭವಿಸಿರಬಹುದೇ ಎಂಬ ಅನುಮಾನವನ್ನೂ ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ.

ಮೃತ ಯಶ್ವಿನ್, ಮುನಿನಾರಾಯಣಪ್ಪ ಅವರ ಪುತ್ರ ನಂದೀಶ್ ಅವರ ಮಗನಾಗಿದ್ದರೆ, ಪ್ರಜ್ವಲ್ ಅವರು ಮುನಿನಾರಾಯಣಪ್ಪ ಅವರ ಸಹೋದರ ವೆಂಕಟರೋಣಪ್ಪ ಅವರ ಪುತ್ರ ನಾರಾಯಣಸ್ವಾಮಿ ಅವರ ಮಗ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃಷಿ ಹೊಂಡದಿಂದ ಮೂವರ ಶ*ಗಳನ್ನು ಹೊರತೆಗೆದು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.

Spread the love

Leave a Reply

Your email address will not be published. Required fields are marked *