ಚಲಿಸುತ್ತಿದ್ದ ಕಾರಿನ ಟೈಯರ್ ಬ್ಲಾಸ್ಟ್‌ ಆಗಿ ಭೀಕರ ಅಪ*ಘಾ*ತ – ಐವರು ಸ್ಥಳದಲ್ಲೇ ದುರ್ಮ*ಣ

ಚಿತ್ರದುರ್ಗ: ಚಲಿಸುತ್ತಿದ್ದ ಕಾರಿನ ಟೈಯರ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ದುರ್ಮರಣಕ್ಕೀಡಾದ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿ ಗೇಟ್ ಸಮೀಪ ನಡೆದಿದೆ.

ಮೃತರನ್ನು ಚಳ್ಳಕೆರೆ ಮೂಲದ ಛಾಯಾಗ್ರಾಹಕರಾದ ರಾಘವೇಂದ್ರ, ರುದ್ರೇಶ್, ಸೋಮ, ಮಲ್ಲಿಕಾರ್ಜುನ ಹಾಗೂ ಪ್ರಮೋದ್ ಎಂದು ಗುರುತಿಸಲಾಗಿದೆ. ಇವರು ಎಲ್ಲರೂ ಒಂದೇ ಕಾರಿನಲ್ಲಿ ಬಳ್ಳಾರಿಯಿಂದ ಚಳ್ಳಕೆರೆಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಮಾಹಿತಿಯ ಪ್ರಕಾರ, ಚಳ್ಳಕೆರೆ ಛಾಯಾಗ್ರಾಹಕರ ಸಂಘದ ಸಹ ಕಾರ್ಯದರ್ಶಿಯಾಗಿದ್ದ ರಾಘವೇಂದ್ರ ಸೇರಿದಂತೆ ಐವರು ಬಳ್ಳಾರಿಗೆ ತೆರಳಿದ್ದು, ತಮ್ಮ ಕೆಲಸ ಮುಗಿಸಿಕೊಂಡು ಮರಳಿ ಚಳ್ಳಕೆರೆಗೆ ಬರುತ್ತಿದ್ದರು. ಈ ವೇಳೆ ತುಮಕೂರ್ಲಹಳ್ಳಿ ಗೇಟ್ ಸಮೀಪ ಕಾರು ಸಂಚರಿಸುತ್ತಿದ್ದಾಗ ಏಕಾಏಕಿ ಕಾರಿನ ಟೈಯರ್ ಸ್ಫೋಟಗೊಂಡಿದೆ. ಟೈಯರ್ ಸ್ಫೋಟದ ಪರಿಣಾಮ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಚಾಲಕ ಕಾರನ್ನು ನಿಯಂತ್ರಿಸಲು ಯತ್ನಿಸಿದರೂ ಸಾಧ್ಯವಾಗದೆ, ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಕಾರು ಭೀಕರವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಅದರೊಳಗಿದ್ದ ಐವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಆದರೆ ಅಷ್ಟರಲ್ಲೇ ಐವರ ಜೀವ ಹೋಗಿರುವುದು ದೃಢಪಟ್ಟಿದೆ.

ಘಟನಾ ಸ್ಥಳಕ್ಕೆ ಮೊಳಕಾಲ್ಮೂರು ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್ ಲಕ್ಷ್ಮಣ ಹೊಸಪೇಟೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಪಘಾತದ ಕುರಿತು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ಈ ಘಟನೆ ಚಳ್ಳಕೆರೆ ಹಾಗೂ ಛಾಯಾಗ್ರಾಹಕರ ವಲಯದಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೊಳಕಾಲ್ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Spread the love

Leave a Reply

Your email address will not be published. Required fields are marked *