ಚಿತ್ರದುರ್ಗ: ಹಣ ಡಬ್ಲಿಂಗ್ ದಂಧೆ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಚಂದ್ರಶೇಖರ್ ಅಲಿಯಾಸ್ ಕೋಟಾನೋಟ್ ಚಂದ್ರ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಮೃತ ಮಲ್ಲಿಕಾರ್ಜುನ (40) ಅವರಿಗೆ ಸಾಲ (ಲೋನ್) ದೊರಕಿಸಿಕೊಡುವುದಾಗಿ ನಂಬಿಸಿ ಚಂದ್ರಶೇಖರ್ ವಂಚನೆ ನಡೆಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಮಲ್ಲಿಕಾರ್ಜುನ ಅವರ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು ಹಣ ಡಬ್ಲಿಂಗ್ ದಂಧೆ ನಡೆಸಲಾಗಿತ್ತು ಎಂದು ಆರೋಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಮಲ್ಲಿಕಾರ್ಜುನ ಪ್ರಮುಖ ಸಾಕ್ಷಿದಾರರಾಗಿದ್ದರು.
ಈ ಪ್ರಕರಣದಲ್ಲಿ ಮಲ್ಲಿಕಾರ್ಜುನ ಸಾಕ್ಷಿಯಾಗಿರುವುದು ಚಂದ್ರಶೇಖರ್ಗೆ ತೊಂದರೆಯಾಗುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಮೇ 1ರಂದು ಚಿತ್ರದುರ್ಗ ಜಿಲ್ಲೆಯ ಜಾನಕೊಂಡ ಸಮೀಪದ ತೋಟವೊಂದರ ಮನೆಯಲ್ಲೇ ಮಲ್ಲಿಕಾರ್ಜುನ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಆರಂಭದಲ್ಲಿ ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಆದರೆ ನಂತರದ ತನಿಖೆಯಲ್ಲಿ ಹಲವು ಅನುಮಾನಾಸ್ಪದ ಅಂಶಗಳು ಹೊರಬಂದಿವೆ.
ಈ ಹಿಂದೆ ಏಪ್ರಿಲ್ 14ರಂದು ಸಂಭವಿಸಿದ್ದ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಮಲ್ಲಿಕಾರ್ಜುನ ಚಿಕಿತ್ಸೆ ಪಡೆದು ಏಪ್ರಿಲ್ 18ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಅವರನ್ನು ಚಂದ್ರಶೇಖರ್ಗೆ ಸೇರಿದ ತೋಟದ ಮನೆಯಲ್ಲಿ ಅಕ್ರಮವಾಗಿ ಇರಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಹಣ ಡಬ್ಲಿಂಗ್ ದಂಧೆಗೆ ಸಂಬಂಧಿಸಿದ ವಿಚಾರಗಳು ಬಹಿರಂಗವಾಗುವ ಭೀತಿಯಿಂದ ಮಲ್ಲಿಕಾರ್ಜುನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಅವರ ಪತ್ನಿ ಆಶಾ ಆರೋಪಿಸಿದ್ದಾರೆ. ಈ ಕುರಿತು ಅವರು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಚಂದ್ರಶೇಖರ್ ಅಲಿಯಾಸ್ ಕೋಟಾನೋಟ್ ಚಂದ್ರ ಹಾಗೂ ಸದಾಶಿವ ನಾಯಕ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಈ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿರುವ ಚಂದ್ರಶೇಖರ್ ಪುತ್ರ ವಿನಾಯಕ್ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಆರೋಪಿ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಪ್ರಕರಣವು ಹಣ ಡಬ್ಲಿಂಗ್ ದಂಧೆ, ವಂಚನೆ ಹಾಗೂ ಸಂಚು ರೂಪಿಸಿ ನಡೆಸಲಾದ ಹತ್ಯೆಯ ಶಂಕೆಯನ್ನು ಒಳಗೊಂಡಿರುವುದರಿಂದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
