ತಿಪಟೂರು: ನಗರದ ಹೊರವಲಯದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರ ಬೈಪಾಸ್ನ ಅಂಡರ್ಪಾಸ್ನಲ್ಲಿ ಮಳೆ ಬಂದಾಗಲೆಲ್ಲ ನೀರು ಸಂಗ್ರಹವಾಗುತ್ತಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ದಾಟಲು ಸಾಧ್ಯವಾಗದೆ ಜನರು ವೇಗವಾಗಿ ಸಂಚರಿಸುವ ವಾಹನಗಳ ನಡುವೆ ಜೀವದ ಹಂಗು ತೊರೆದು ಹೆದ್ದಾರಿ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಲ್ಕೆಳಗೆ, ಕೆಂಚರಾಯನಗರ, ಹೊಸ ಬಡಾವಣೆ, ಗೆದ್ದಲಹಳ್ಳಿ ಹಾಗೂ ತೋಟದ ಮನೆಗಳ ಸುತ್ತಮುತ್ತ ಸಾವಿರಾರು ಜನರು ವಾಸಿಸುತ್ತಿದ್ದು, ಹಳೇಪಾಳ್ಯಕ್ಕೆ ತೆರಳಲು ಇದೇ ಅಂಡರ್ಪಾಸ್ ಅವಲಂಬಿಸಿದ್ದಾರೆ. ಆದರೆ, ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿರುವ ಸರ್ವಿಸ್ ರಸ್ತೆಗಳು ಅಂಡರ್ಪಾಸ್ಗಿಂತ ಎತ್ತರದಲ್ಲಿರುವುದರಿಂದ ಮಳೆ ನೀರು ಅಲ್ಲಿ ಹರಿದು ಸಂಗ್ರಹವಾಗುತ್ತದೆ. ಪರಿಣಾಮ ಅಂಡರ್ಪಾಸ್ ಆಳದವರೆಗೆ ನೀರು ತುಂಬಿಕೊಂಡು ಸ್ವಿಮ್ಮಿಂಗ್ ಪೂಲ್ನಂತಾಗುತ್ತದೆ.
ಹೋರಾಟಕ್ಕೂ ಸಿಗದ ಪರಿಹಾರ
ಅಂಡರ್ಪಾಸ್ನ ಅವ್ಯವಸ್ಥೆ ಕುರಿತು ಈಗಾಗಲೇ ಸ್ಥಳೀಯರು ಹಲವು ಬಾರಿ ಹೋರಾಟ ನಡೆಸಿ, ವ್ಯವಸ್ಥಿತ ರಸ್ತೆ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಹಿಂದೆ ವಿಶ್ವವಾಣಿ ಪತ್ರಿಕೆಯೂ ‘ಉಪಯೋಗಕ್ಕೆ ಬಾರದ ಅಂಡರ್ಪಾಸ್’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿಯ ಬಳಿಕ ಮೇಲ್ಭಾಗಕ್ಕೆ ಶೀಟ್ಗಳನ್ನು ಅಳವಡಿಸಿ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗಿತ್ತು. ಆದರೂ ನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ.
ಅಂಡರ್ಪಾಸ್ನಲ್ಲಿ ನೀರು ತುಂಬಿದಾಗ ಅನಿವಾರ್ಯವಾಗಿ ಹೆದ್ದಾರಿ ದಾಟುವ ಜನರಿಗೆ ಅಪಘಾತದ ಭೀತಿ ಎದುರಾಗಿದೆ. ಸ್ಥಳೀಯರು ಹಲವು ಬಾರಿ ಮನವಿ ಮಾಡಿದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಕರೆ ಮಾಡಿದರೂ ಅಧಿಕಾರಿಗಳು ಕರೆ ಸ್ವೀಕರಿಸುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರ್ಯಾಯ ವ್ಯವಸ್ಥೆಗೆ ಆಗ್ರಹ
ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಂಡರ್ಪಾಸ್ನ ನೀರು ತೆರವುಗೊಳಿಸಲು ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು ಅಥವಾ ಸುರಕ್ಷಿತ ಪರ್ಯಾಯ ಸಂಚಾರ ಮಾರ್ಗ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
