ಬೆಂಗಳೂರು: ಪಾಗಲ್ ಪ್ರೇಮಿಯ ನಿರಂತರ ಕಿರುಕುಳ ಹಾಗೂ ಬೆದರಿಕೆಯಿಂದ ಬೇಸತ್ತು ವಿವಾಹಿತೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಇಂದಿರಾನಗರದ ಲಕ್ಷ್ಮೀಪುರಂನಲ್ಲಿ ನಡೆದಿದೆ. ಆಗಸ್ಟ್ 6ರಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸ್ ತನಿಖೆ ವೇಳೆ ಪ್ರಕರಣದ ಹಿಂದಿನ ಕಾರಣ ತಡವಾಗಿ ಬೆಳಕಿಗೆ ಬಂದಿದೆ.
ಮೃತ ಮಹಿಳೆಯನ್ನು 21 ವರ್ಷದ ಕವಿತಾ ಎಂದು ಗುರುತಿಸಲಾಗಿದೆ. 2024ರಲ್ಲಿ ಕವಿತಾ ಅವರಿಗೆ ವಿವಾಹವಾಗಿದ್ದು, ಒಂದೂವರೆ ವರ್ಷದ ಮಗುವೂ ಇದೆ. ಇತ್ತೀಚೆಗೆ ಕವಿತಾ ಮನೆಯ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ಘಟನೆ ಸಂಬಂಧ ತನಿಖೆ ಆರಂಭಿಸಿದ ಪೊಲೀಸರಿಗೆ ಕವಿತಾ ಆತ್ಮಹತ್ಯೆ ಮಾಡಿಕೊಳ್ಳಲು ಪಾಗಲ್ ಪ್ರೇಮಿಯ ಕಿರುಕುಳವೇ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮದುವೆಯಾದರೂ ಕಾಟ ನಿಲ್ಲಿಸದ ಆರೋಪಿ
ಪೊಲೀಸರ ಪ್ರಕಾರ, ಸುಮಾರು ಮೂರು ವರ್ಷಗಳ ಹಿಂದೆ ಕಿರಣ್ ಕವಿತಾಳನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡು ಆಕೆಯ ಹಿಂದೆ ಬಿದ್ದಿದ್ದ. ಈ ವಿಚಾರ ತಿಳಿದ ಕವಿತಾ ಕುಟುಂಬಸ್ಥರು ಕಿರಣ್ಗೆ ಬುದ್ಧಿವಾದ ಹೇಳಿ, ಆಕೆಯಿಂದ ದೂರವಿರುವಂತೆ ಸೂಚಿಸಿದ್ದರು.
ನಂತರ 2024ರಲ್ಲಿ ಕವಿತಾ ಅವರಿಗೆ ರಾಜು ಎಂಬವರೊಂದಿಗೆ ವಿವಾಹ ಮಾಡಲಾಗಿತ್ತು. ಮದುವೆಯಾಗಿ ಸಂಸಾರ ನಡೆಸುತ್ತಿದ್ದರೂ ಕಿರಣ್ ಮಾತ್ರ ಕವಿತಾಳನ್ನು ಹಿಂಬಾಲಿಸುವುದು ಹಾಗೂ ಸಂದೇಶಗಳನ್ನು ಕಳುಹಿಸುವುದನ್ನು ಮುಂದುವರಿಸಿದ್ದ ಎನ್ನಲಾಗಿದೆ.
ಮೆಸೇಜ್ ಮಾಡಿ ಬೆದರಿಕೆ
ಮದುವೆಯ ಬಳಿಕವೂ ಕಿರಣ್ ಕವಿತಾಗೆ ನಿರಂತರವಾಗಿ ಸಂದೇಶಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ. ಮೆಸೇಜ್ಗಳಿಗೆ ಪ್ರತಿಕ್ರಿಯೆ ನೀಡದಿದ್ದರೆ ತಾನು ಸಾಯುವುದಾಗಿ ಬೆದರಿಕೆ ಹಾಕುತ್ತಿದ್ದ. ಅಲ್ಲದೆ, ತನ್ನ ನೆಮ್ಮದಿಯನ್ನು ಹಾಳು ಮಾಡಿದರೆ ಆಕೆಯ ಜೀವನವನ್ನೂ ಹಾಳು ಮಾಡುವುದಾಗಿ ಬೆದರಿಸಿದ್ದ ಎನ್ನಲಾಗಿದೆ.
ಕಿರಣ್ನ ನಿರಂತರ ಕಿರುಕುಳದಿಂದ ಕವಿತಾ ಮಾನಸಿಕವಾಗಿ ನೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಚಾರವನ್ನು ಕವಿತಾ ಅವರ ಪತಿ ರಾಜು ಕೂಡ ಕುಟುಂಬಸ್ಥರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ.
ಕುಟುಂಬಕ್ಕೆ ವಿಷಯ ತಿಳಿದಿದ್ದರಿಂದ ನೊಂದಿದ್ದ ಕವಿತಾ
ಕಿರಣ್ ಕಳುಹಿಸುತ್ತಿದ್ದ ಸಂದೇಶಗಳು ಹಾಗೂ ಆತನ ಕಿರುಕುಳದ ವಿಚಾರ ಪತಿ ಮತ್ತು ಮನೆಯವರಿಗೆ ತಿಳಿದುಬಂದಿದ್ದರಿಂದ ಕವಿತಾ ಮತ್ತಷ್ಟು ನೊಂದಿದ್ದರು ಎನ್ನಲಾಗಿದೆ. ಇದೇ ಮಾನಸಿಕ ಒತ್ತಡದಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಸದ್ಯ ಕಿರಣ್ನನ್ನು ಬಂಧಿಸಿರುವ ಪೊಲೀಸರು ಆತನ ಮೊಬೈಲ್ ಸೇರಿದಂತೆ ಹಲವು ಮಾಹಿತಿಗಳನ್ನು ಪರಿಶೀಲಿಸುತ್ತಿದ್ದಾರೆ. ಕವಿತಾಗೆ ಕಿರುಕುಳ ನೀಡಿದ್ದ ರೀತಿಯ ಬಗ್ಗೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
