ಹಾಸನ: ಮೊಬೈಲ್ ಫೋನ್ ಕೊಡಿಸದಿದ್ದಕ್ಕೆ ಮನನೊಂದ 13 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಹಾಸನ ನಗರದ ಹೊರವಲಯದ ಯಡಿಯೂರು ಗ್ರಾಮದಲ್ಲಿ ನಡೆದಿದೆ. ಈ ದುರ್ಘಟನೆ ಕುಟುಂಬಸ್ಥರನ್ನು ತೀವ್ರ ಆಘಾತಕ್ಕೆ ತಳ್ಳಿದ್ದು, ಗ್ರಾಮದಲ್ಲೂ ಶೋಕದ ವಾತಾವರಣ ನಿರ್ಮಾಣವಾಗಿದೆ.
ಮೃತ ಬಾಲಕನನ್ನು ಪ್ರೀತಂ (13) ಎಂದು ಗುರುತಿಸಲಾಗಿದೆ. ಆತ ಚಿತ್ರದುರ್ಗ ಮೂಲದ ಶ್ರೀನಿವಾಸ್–ಗೌರಮ್ಮ ದಂಪತಿಯ ಪುತ್ರನಾಗಿದ್ದು, ಚಿತ್ರದುರ್ಗದಲ್ಲಿ ಏಳನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಪ್ರೀತಂನ ಪೋಷಕರು ಹಾಸನದ ಯಡಿಯೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿದ್ದ ಖಾಸಗಿ ಲೇಔಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್‌ನಲ್ಲಿ ವಾಸವಾಗಿದ್ದರು. ಶನಿವಾರ ಪೋಷಕರನ್ನು ಭೇಟಿ ಮಾಡಲು ಪ್ರೀತಂ ಯಡಿಯೂರಿಗೆ ಬಂದಿದ್ದನು.
ಕುಟುಂಬದವರ ಮಾಹಿತಿ ಪ್ರಕಾರ, ಪ್ರೀತಂ ಕಳೆದ ಕೆಲವು ದಿನಗಳಿಂದ ಮೊಬೈಲ್ ಫೋನ್ ಕೊಡಿಸುವಂತೆ ಪೋಷಕರನ್ನು ಒತ್ತಾಯಿಸುತ್ತಿದ್ದ. ಆದರೆ ಆರ್ಥಿಕ ಪರಿಸ್ಥಿತಿ ಹಾಗೂ ಇತರ ಕಾರಣಗಳಿಂದ ತಂದೆ ಮೊಬೈಲ್ ಖರೀದಿಸಲು ನಿರಾಕರಿಸಿದ್ದರು. ಇದೇ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ ಬಾಲಕ ತೀವ್ರವಾಗಿ ನೊಂದಿದ್ದಾನೆ ಎನ್ನಲಾಗಿದೆ.
ಪೋಷಕರು ಕೆಲಸದ ನಿಮಿತ್ತ ಹೊರಗಿದ್ದ ವೇಳೆ, ಶೆಡ್‌ನೊಳಗೆ ಒಬ್ಬನೇ ಇದ್ದ ಪ್ರೀತಂ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೆಲ ಸಮಯದ ಬಳಿಕ ಕುಟುಂಬಸ್ಥರು ಶೆಡ್‌ಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಈ ಘಟನೆ ಕುರಿತು ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಹಾಗೂ ಘಟನೆಯ ಎಲ್ಲಾ ಆಯಾಮಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಘಟನೆ ಪೋಷಕರು ಮತ್ತು ಮಕ್ಕಳ ನಡುವಿನ ಸಂವಹನ, ಮಕ್ಕಳ ಭಾವನಾತ್ಮಕ ಸ್ಥಿತಿ ಹಾಗೂ ಮೊಬೈಲ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬಾಲಕನ ಅಕಾಲಿಕ ಸಾವಿಗೆ ಗ್ರಾಮಸ್ಥರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
