ನೆಲಮಂಗಲದಲ್ಲಿ ಹೆಬ್ಬಾವು ಹಾವಳಿ? ಕೊನೆಗೆ ಬಯಲಾಯ್ತು ಫೋಟೋ ರಹಸ್ಯ!

ನೆಲಮಂಗಲ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಬೃಹತ್ ಗಾತ್ರದ ಹೆಬ್ಬಾವಿನ ಎಐ (AI) ಫೋಟೋವೊಂದು ನೆಲಮಂಗಲದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ಬೆಳಕಿಗೆ ಬಂದಿದೆ. ಯುವಕರ ತಮಾಷೆಯೊಂದು ಗ್ರಾಮಸ್ಥರನ್ನು ಮಾತ್ರವಲ್ಲದೆ ಉರಗ ರಕ್ಷಕರನ್ನೂ ಸಂಕಷ್ಟಕ್ಕೆ ಸಿಲುಕಿಸಿದ ಪ್ರಸಂಗ ನಡೆದಿದೆ.

ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಜಕ್ಕಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಕೆಲ ಯುವಕರು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ದೈತ್ಯಾಕಾರದ ಹೆಬ್ಬಾವಿನ ಫೋಟೋ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಫೋಟೋ ನೋಡಿದ ಅನೇಕರು ನಿಜವಾಗಿಯೂ ಗ್ರಾಮಕ್ಕೆ ಬೃಹತ್ ಹೆಬ್ಬಾವು ಬಂದಿದೆ ಎಂದು ನಂಬಿದ್ದರು.

ಫೋಟೋ ಕೆಲವೇ ಗಂಟೆಗಳಲ್ಲಿ ವಾಟ್ಸ್‌ಆ್ಯಪ್, ಫೇಸ್‌ಬುಕ್ ಹಾಗೂ ಸ್ಟೇಟಸ್‌ಗಳಲ್ಲಿ ವೈರಲ್ ಆಗಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿತ್ತು. ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರು ಮನೆಯಿಂದ ಹೊರಬರಲು ಹೆದರುವಂತಾಗಿತ್ತು. ಕೆಲವರು ಸಂಜೆ ವೇಳೆಯಲ್ಲಿ ಗ್ರಾಮದಲ್ಲಿ ಓಡಾಡುವುದಕ್ಕೂ ಆತಂಕ ವ್ಯಕ್ತಪಡಿಸಿದ್ದರು.

ವೈರಲ್ ಫೋಟೋ ನೋಡಿ ನಿಜವಾದ ಹೆಬ್ಬಾವು ಗ್ರಾಮಕ್ಕೆ ಬಂದಿರಬಹುದು ಎಂದು ಭಾವಿಸಿದ ಉರಗ ರಕ್ಷಕ ಸ್ನೇಕ್ ಅರುಣ್ ಕೂಡ ತಕ್ಷಣ ಸ್ಥಳಕ್ಕೆ ಧಾವಿಸಿದ್ದರು. ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ಎರಡು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದರೂ ಯಾವುದೇ ಹೆಬ್ಬಾವು ಪತ್ತೆಯಾಗಿರಲಿಲ್ಲ.

ಬಳಿಕ ಫೋಟೋ ಕುರಿತು ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಹೆಚ್ಚಿನ ಪರಿಶೀಲನೆ ನಡೆಸಿದಾಗ, ಇದು ನಿಜವಾದ ಚಿತ್ರವಲ್ಲದೆ ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಿದ ಚಿತ್ರ ಎಂಬುದು ಬೆಳಕಿಗೆ ಬಂದಿದೆ. ತನಿಖೆ ಮುಂದುವರಿದಾಗ ಗ್ರಾಮದ ಕೆಲ ಯುವಕರು ಈ ಫೋಟೋವನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಿ ಹರಡಿರುವುದು ಗೊತ್ತಾಗಿದೆ.

ಮನೆಯಗಳಿಗೆ ಸರಿಯಾಗಿ ನೀರು ಬಿಡುತ್ತಿಲ್ಲ ಎಂಬ ಅಸಮಾಧಾನದಿಂದ ಗ್ರಾಮದಲ್ಲಿನ ವಾಟರ್‌ಮ್ಯಾನ್ ಪ್ರಸಾದ್ ಅವರನ್ನು ಹೆದರಿಸಲು ಈ ಎಐ ಫೋಟೋವನ್ನು ಸೃಷ್ಟಿಸಿ ವೈರಲ್ ಮಾಡಲಾಗಿತ್ತು ಎನ್ನಲಾಗಿದೆ. ಹೆಬ್ಬಾವು ಬಂದಿದೆ ಎಂಬ ಭಯದಿಂದ ಅವರು ಆ ಭಾಗಕ್ಕೆ ಬರಬಾರದು ಎಂಬ ಉದ್ದೇಶದಿಂದ ಯುವಕರು ಈ ತಮಾಷೆ ಮಾಡಿದ್ದರು ಎಂದು ತಿಳಿದುಬಂದಿದೆ.

ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು, ಬಳಿಕ ಈ ಘಟನೆ ಗ್ರಾಮದಲ್ಲಿ ಹಾಸ್ಯದ ವಿಷಯವಾಗಿ ಮಾರ್ಪಟ್ಟಿದೆ. ದೈತ್ಯ ಹೆಬ್ಬಾವು ಬಂದಿದೆ ಎಂದು ಭಯಗೊಂಡಿದ್ದ ಜನರು, ಕೊನೆಗೆ ಅದು ಎಐ ಸೃಷ್ಟಿಯ ಫೋಟೋ ಎಂಬುದು ತಿಳಿದಾಗ ಬಿದ್ದು ಬಿದ್ದು ನಕ್ಕಿದ್ದಾರೆ.

Spread the love

Leave a Reply

Your email address will not be published. Required fields are marked *