ದೊಡ್ಡಬಳ್ಳಾಪುರ: ಕೇವಲ 200 ರೂಪಾಯಿ ಸಾಲದ ವಿಚಾರ ಕೊನೆಗೆ ಒಂದು ಜೀವ ಬಲಿಯಾಗುವಂತೆ ಮಾಡಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಅಪ್ಪಕಾರನಹಳ್ಳಿ ಗೇಟ್ ಬಳಿ ನಡೆದಿದೆ. ಹಳೆಯ ಸಾಲದ ಹಣ ಕೇಳಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ, ನೀಲಗಿರಿ ಮರದ ದೊಣ್ಣೆಯಿಂದ ಮನಸೋಯಿಚ್ಚೆ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾರೆ.
ಮೃತರನ್ನು ದೊಡ್ಡಬಳ್ಳಾಪುರ ತಾಲೂಕಿನ (Doddaballapura Taluk) ದ್ಯಾವಸಂದ್ರ ಗ್ರಾಮದ ನಿವಾಸಿ ಮಂಜುನಾಥ್ (40) ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಮುನಿರಾಜ್ (41) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಮೇ 12ರಂದು ಬೆಳಗ್ಗೆ ಮುನಿರಾಜ್ ಟೀ ಅಂಗಡಿಗೆ ಬಂದು ಮತ್ತೊಮ್ಮೆ ಸಾಲದಲ್ಲೇ ಟೀ ನೀಡುವಂತೆ ಕೇಳಿದ್ದಾನೆ ಎನ್ನಲಾಗಿದೆ. ಈ ವೇಳೆ ಮಂಜುನಾಥ್, “ಮೊದಲು ಹಳೆಯ ಸಾಲದ ಹಣ ಕೊಡು” ಎಂದು ಹೇಳಿದ್ದರಿಂದ ಇಬ್ಬರ ಮಧ್ಯೆ ವಾಗ್ವಾದ ಆರಂಭವಾಗಿದೆ.
ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕೋಪಗೊಂಡ ಮುನಿರಾಜ್ ಪಕ್ಕದಲ್ಲೇ ಇದ್ದ ನೀಲಗಿರಿ ಮರದ ದೊಣ್ಣೆಯನ್ನು ತೆಗೆದುಕೊಂಡು ಮಂಜುನಾಥ್ ತಲೆಗೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ಅವರನ್ನು ತಕ್ಷಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಆರೋಪಿ ಮುನಿರಾಜ್ ವಿರುದ್ಧ ಈ ಹಿಂದೆ ಕೂಡ ಗಂಭೀರ ಪ್ರಕರಣ ದಾಖಲಾಗಿದ್ದವು ಎನ್ನಲಾಗಿದೆ. ತನ್ನ ತಾಯಿಯ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆತ ಜೈಲು ಸೇರಿದ್ದನು. ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದ ಆತ ಇದೀಗ ಮತ್ತೆ ಕೊಲೆ ಪ್ರಕರಣದಲ್ಲಿ ಸಿಲುಕಿದ್ದಾನೆ.
ಘಟನೆ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
⚠️ ಸೂಚನೆ: ಅಪರಾಧ ಸುದ್ದಿಗಳಿಗೆ ಪ್ರತಿಕ್ರಿಯಿಸುವಾಗ ಸಾಮಾಜಿಕ ಜವಾಬ್ದಾರಿ ಮತ್ತು Community Guidelines ಪಾಲಿಸಿ. ದ್ವೇಷ, ಹಿಂಸಾಚಾರ ಪ್ರಚೋದನೆ ಹಾಗೂ ಪರಿಶೀಲಿಸದ ಮಾಹಿತಿಯನ್ನು ಹಂಚಬೇಡಿ.
