ಬೆಂಗಳೂರು: ವಿಚ್ಛೇದಿತ ಮಹಿಳೆಯನ್ನು ಬಣ್ಣದ ಮಾತುಗಳಿಂದ ನಂಬಿಸಿ, ಬಾಳು ಕೊಡುತ್ತೇನೆ, ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ ಮೋಹನ್ ರಾಜ್ ಎಂಬ ವ್ಯಕ್ತಿಯ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ಚಿನ್ನಾಭರಣ ಸೇರಿದಂತೆ ಒಟ್ಟು 36 ಲಕ್ಷ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಹೌದು, ಮೋಹನ್ ರಾಜ್ ಮಹಿಳೆಗೆ ಹೊಸ ಜೀವನ ನೀಡುವುದಾಗಿ ಹೇಳಿ ಮದುವೆಯಾಗಿದ್ದು, ಆ ದಾಂಪತ್ಯದಿಂದ ಮಗು ಕೂಡ ಜನಿಸಿದ್ದಾಗಿದೆ. ಬಳಿಕ ಇಬ್ಬರೂ ಸೇರಿ ಹೊಸ ಮನೆ ಕಟ್ಟಿಕೊಂಡು ಹೊಸ ಬದುಕು ಆರಂಭಿಸೋಣ ಎಂದು ನಂಬಿಸಿ, ಮಹಿಳೆಯಿಂದ ಹಂತ ಹಂತವಾಗಿ ಹಣ ಪಡೆದು, ಚಿನ್ನಾಭರಣ ಸೇರಿ ಒಟ್ಟು 36 ಲಕ್ಷ ರೂಪಾಯಿ ವಂಚನೆ ಮಾಡಿ ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಇದೀಗ ಮೋಸಕ್ಕೆ ಒಳಗಾದ ಮಹಿಳೆ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ಮೋಹನ್ ರಾಜ್ ಮತ್ತು ಮಹಿಳೆ ಒಂದೇ ಪ್ರದೇಶದವರು ಆಗಿದ್ದು, ಬನಶಂಕರಿಯಲ್ಲಿ ನೆಲೆಸಿದ್ದ ಮೋಹನ್‌ಗೆ ಮಹಿಳೆಯ ವಿಚ್ಛೇದನದ ಹಿನ್ನೆಲೆ ಸಂಪೂರ್ಣವಾಗಿ ಗೊತ್ತಿತ್ತು. ಹಲವು ವರ್ಷಗಳಿಂದ ಪರಿಚಯವಿದ್ದ ಈತ, ಇಬ್ಬರೂ ಮದುವೆಯಾಗೋಣ, ಹೊಸ ಜೀವನ ನಡೆಸೋಣ ಎಂದು ಮಾತು ಕೊಟ್ಟು ತಾಳಿಕಟ್ಟಿದ್ದಾನೆ. ಆದರೆ ಮದುವೆಯಾದ ಬಳಿಕ ಕ್ರಮೇಣ ತನ್ನ ವರ್ತನೆ ಬದಲಿಸಿಕೊಂಡು, ಕೊನೆಗೆ ಮನೆ ಬಿಟ್ಟು ನಾಪತ್ತೆಯಾಗಿರುವುದರಿಂದ ಮಹಿಳೆ ಸಂಪೂರ್ಣವಾಗಿ ಕಂಗಾಲಾಗಿದ್ದಾಳೆ.
ಮೋಹನ್ ರಾಜ್ ಮತ್ತು ಮಹಿಳೆ ಸುಮಾರು 10 ವರ್ಷಗಳಿಂದ ಪರಿಚಿತರು ಎನ್ನಲಾಗಿದ್ದು, 2022ರಲ್ಲಿ ಇವರ ವಿವಾಹ ನಡೆದಿತ್ತು. 2023ರಲ್ಲಿ ದಂಪತಿಗೆ ಒಂದು ಹೆಣ್ಣು ಮಗು ಜನಿಸಿದ್ದರೆ, 2025ರಲ್ಲಿ ಮೋಹನ್ ರಾಜ್ ಮನೆ ಬಿಟ್ಟು ಹೋಗಿ ಕಾಣೆಯಾಗಿದ್ದಾನೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ನ್ಯಾಯಕ್ಕಾಗಿ ಅಲೆದಾಡಿದರೂ ಪೊಲೀಸರಿಂದ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪವೂ ಇದೀಗ ಕೇಳಿಬರುತ್ತಿದೆ.
