ಬೆಂಗಳೂರು: ಮನಕಲಕುವಂತಹ ರಸ್ತೆ ಅಪಘಾತದಲ್ಲಿ ಯುವ ಡ್ಯಾನ್ಸರ್ ಮೃತಪಟ್ಟಿರುವ ಘಟನೆ ನೆಲಮಂಗಲ ತಾಲೂಕಿನ ಪೆಮ್ಮನಹಳ್ಳಿ ಬಳಿ ಸಂಭವಿಸಿದೆ. ನಿಂತಿದ್ದ ಕಾರಿಗೆ ಕ್ಯಾಂಟರ್ ಲಾರಿ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದ್ದು, ಸ್ಥಳದಲ್ಲೇ ಸುಧೀಂದ್ರ ಎಂಬ ಯುವ ಡ್ಯಾನ್ಸರ್ ಪ್ರಾಣ ಕಳೆದುಕೊಂಡಿದ್ದಾರೆ.
ಮೃತನಾದ ಸುಧೀಂದ್ರ ತ್ಯಾಮಗೊಂಡ್ಲು ಗ್ರಾಮದ ನಿವಾಸಿಯಾಗಿದ್ದು, ಕನ್ನಡದ ಜನಪ್ರಿಯ “ಸೈ ಡ್ಯಾನ್ಸ್ ಶೋ” ಸೇರಿದಂತೆ ಅನೇಕ ಟಿವಿ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗುರುತಿಸಿಕೊಂಡಿದ್ದರು. ಯುವ ಪ್ರತಿಭಾವಂತರಾದ ಸುಧೀಂದ್ರ, ಕೇವಲ ನೃತ್ಯಗಾರನಾಗಿರದೆ, ಶಿಕ್ಷಕ ಹಾಗೂ ಇವೆಂಟ್ ಆಯೋಜಕರಾಗಿಯೂ ತಮ್ಮ ಬದುಕು ಕಟ್ಟಿಕೊಂಡಿದ್ದರು. ಅವರು ಡಾಬಸ್ ಪೇಟೆಯಲ್ಲಿ “ಸೈ ಡ್ಯಾನ್ಸ್ ಅಕಾಡೆಮಿ” ಎಂಬ ನೃತ್ಯ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದು, ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದರು. ಜೊತೆಗೆ ಫ್ಲವರ್ ಡೆಕೋರೇಷನ್ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಜೀವನ ಸಾಗಿಸುತ್ತಿದ್ದರು.
ಘಟನೆಯ ವಿವರ ಪ್ರಕಾರ — ಸೋಮವಾರದಷ್ಟೇ ಸುಧೀಂದ್ರ ಹೊಸ ಮಾರುತಿ ಸುಜುಕಿ ಎಕೋ ಕಾರಿನ ಡೆಲಿವರಿ ಪಡೆದಿದ್ದರು. ಇಂದು ಬೆಳಿಗ್ಗೆ ಅವರು ಕಾರು ಚಲಾಯಿಸುತ್ತ ಪೆಮ್ಮನಹಳ್ಳಿ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಕಾರು ತಾಂತ್ರಿಕ ದೋಷದಿಂದ ಮಧ್ಯರಸ್ತೆಯಲ್ಲಿ ನಿಂತು ಹೋಗುತ್ತದೆ. ಇದರಿಂದ ಕಾರು ಏನಾದರೂ ಸಮಸ್ಯೆಯಾಗಿದೆಯೇ ಎಂದು ಪರಿಶೀಲಿಸಲು ಅವರು ವಾಹನದಿಂದ ಇಳಿದ ಕ್ಷಣದಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಕ್ಯಾಂಟರ್ ಲಾರಿ ನಿಂತಿದ್ದ ಕಾರಿಗೆ ನೇರವಾಗಿ ಡಿಕ್ಕಿ ಹೊಡೆದಿದೆ.
ಅಪಘಾತದ ಬಲದಿಂದ ಸುಧೀಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯರು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದರೂ, ಆ ವೇಳೆಗೆ ಅವರು ಪ್ರಾಣ ಕಳೆದುಕೊಂಡಿದ್ದರು. ಈ ದುರ್ಘಟನೆ ಸ್ಥಳೀಯರಲ್ಲಿ ಆಘಾತ ಉಂಟುಮಾಡಿದ್ದು, ನೆಲಮಂಗಲ ಹಾಗೂ ಡಾಬಸ್ ಪೇಟೆ ಪ್ರದೇಶದ ಕಲಾವಿದ ಸಮುದಾಯದಲ್ಲಿ ಶೋಕದ ಛಾಯೆ ಆವರಿಸಿದೆ.
ಘಟನೆಯು ಡಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ. ಸುಧೀಂದ್ರನ ಅಗಲಿಕೆಯಿಂದ ಕುಟುಂಬಸ್ಥರು, ವಿದ್ಯಾರ್ಥಿಗಳು ಹಾಗೂ ಸಹ ಕಲಾವಿದರು ದುಃಖದಲ್ಲಿ ಮುಳುಗಿದ್ದಾರೆ.
