ಅಮರಾವತಿ: ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಐಟಿ (IT) ಕಂಪನಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಟಾಟಾ ಸಮೂಹದ (Tata Groups) ಒಡೆತನದ ಟಿಸಿಎಸ್ ಕಂಪನಿಗೆ ಆಂಧ್ರ ಸರ್ಕಾರ (Andhra Government) ವಿಶಾಖಪಟ್ಟಣದಲ್ಲಿ ಕಚೇರಿ ತೆರೆಯಲು ಕೇವಲ 99 ಪೈಸೆಗೆ 21.6 ಎಕರೆ ಭೂಮಿಯನ್ನು ನೀಡಿದೆ.
ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರು ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ್ದಾರೆ. ದೇಶದ ಐಟಿ ಹಬ್ ಆಗಿರುವ ಬೆಂಗಳೂರಿಗೆ ಸೆಡ್ಡುಹೊಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಂಧ್ರ ಸರ್ಕಾರದ ವಿಶ್ಲೇಷಿಸಿದೆ.
ವಿಶಾಖಪಟ್ಟಣದ 21.6 ಎಕರೆ ಭೂಮಿಯಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಕಂಪನಿಯು ಕಚೇರಿ ತೆರೆಯಲಿದೆ. ಈ ಕಚೇರಿಗೆ ಕಂಪನಿ 1370 ಕೋಟಿ ರೂ. ಹೂಡಿಕೆ ಮಾಡಲಿದ್ದು, ಮುಂದಿನ 2-3 ವರ್ಷದಲ್ಲಿ 12,000 ಉದ್ಯೋಗ ಸೃಷ್ಟಿಯಾಗಲಿದೆ. ರಾಜ್ಯಕ್ಕೆ ಈ ಕಂಪನಿಯನ್ನು ಕರೆತರುವಲ್ಲಿ ಐಟಿ ಸಚಿವ ನಾರಾ ಲೋಕೇಶ್ ಪಾತ್ರ ಅಧಿಕವಾಗಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆ ಬೆಂಗಳೂರಿನಲ್ಲಿ ಮಳೆ ಅವಾಂತರವಾಗಿ ಮೂಲಸೌಕರ್ಯದ ಬಗ್ಗೆ ಭಾರೀ ಟೀಕೆ ವ್ಯಕ್ತವಾದಾಗ ಆಂಧ್ರದ ರಾಜಕಾರಣಿಗಳು ಕರ್ನಾಟಕ ಬಿಟ್ಟು ಆಂಧ್ರಕ್ಕೆ ಬನ್ನಿ ಎಂದು ಜಾಲತಾಣದ ಮೂಲಕವೇ ಐಟಿ-ಬಿಟಿ ಕಂಪನಿಗಳಿಗೆ ಆಫರ್ ನೀಡುತ್ತಿದ್ದರು. ಆದರೂ ಯಾವುದೇ ಕಂಪನಿಗಳು ಐಟಿ ಸಿಟಿ ಬಿಟ್ಟಿರಲಿಲ್ಲ. ಹೀಗಾಗಿ ಆಂಧ್ರ ಸರ್ಕಾರವೀಗ ಆಫರ್ ಮೂಲಕ ಐಟಿ ಕಂಪನಿಗಳ ಸೆಳೆಯಲು ಪ್ಲ್ಯಾನ್ ಹಾಕಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಟಾಟಾ ಮೋಟರ್ಸ್ ಕಂಪನಿಗೆ ಗುಜರಾತ್‌ನ ಸನ್ನದ್‌ನಲ್ಲಿ ಕೇವಲ 99 ಪೈಸೆಗೆ ಸ್ಥಳ ನೀಡಿದ್ದರು. ಈ ಕ್ರಮದಿಂದಾಗಿ ಗುಜರಾತ್‌ನಲ್ಲಿ ಉದ್ಯಮಗಳ ಹರಿವು ಹೆಚ್ಚಾಗಿತ್ತು. ಹೀಗಾಗಿ ಆಂಧ್ರ ಸರ್ಕಾರದ ಈ ಕ್ರಮವು ಐಟಿ ಕ್ಷೇತ್ರದ ಸನ್ನದ್ ಕ್ಷಣ ಎಂದು ಆಂಧ್ರ ಅಧಿಕಾರಿಗಳು ಕೊಂಡಾಡಿದ್ದಾರೆ.