ಶಿವಮೊಗ್ಗ: ಮದುವೆಯಾಗಿ ಕೇವಲ 45 ದಿನಗಳಷ್ಟೇ ಕಳೆದಿದ್ದ ನವದಂಪತಿ ರಸ್ತೆ ಅಪಘಾತದಲ್ಲಿ ಕೊನೆಗೊಂಡಿರುವ ದಾರುಣ ಘಟನೆ ಶಿವಮೊಗ್ಗ ನಗರದ ಹೊರವಲಯದ ರಿಂಗ್ ರಸ್ತೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಶರಾವತಿ ನಗರದ ನಿವಾಸಿಗಳಾದ ಜಿ. ಕಿರಣ್ (28) ಮತ್ತು ಅವರ ಪತ್ನಿ ಸೌಮ್ಯ (22) ಹಸುನಿಗಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಕಿರಣ್, ಶನಿವಾರ ರಾತ್ರಿ ಪತ್ನಿ ಸೌಮ್ಯ ಅವರೊಂದಿಗೆ ಸ್ಕೂಟಿಯಲ್ಲಿ ಶರಾವತಿ ನಗರದ ಮನೆಯಿಂದ ಗೋವಿಂದಪುರದಲ್ಲಿರುವ ಸೌಮ್ಯ ಅವರ ತವರು ಮನೆಗೆ ತೆರಳುತ್ತಿದ್ದರು. ಈ ವೇಳೆ ಸಾಗರ ರಸ್ತೆ ಸಮೀಪದ ರಿಂಗ್ ರಸ್ತೆಯಲ್ಲಿ ವೇಗವಾಗಿ ಬಂದ ಕಾರೊಂದು ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಸ್ಕೂಟಿ ಜಖಂಗೊಂಡಿದ್ದು, ರಸ್ತೆಗೆ ಬಿದ್ದ ದಂಪತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ದಂಪತಿ ಹೊಸ ಜೀವನದ ಕನಸು ಕಾಣುತ್ತಿದ್ದರು. ಆದರೆ, ಅಪಘಾತದಿಂದಾಗಿ ಎರಡೂ ಕುಟುಂಬಗಳಲ್ಲಿ ಶೋಕ ಆವರಿಸಿದೆ. ಪ್ರೀತಿಸಿ ಮದುವೆಯಾಗಿದ್ದ ಕಿರಣ್ ಮತ್ತು ಸೌಮ್ಯ ಅವರ ಅಂತ್ಯಕ್ರಿಯೆ ವಿಚಾರದಲ್ಲಿಯೂ ಕುಟುಂಬಸ್ಥರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಕಿರಣ್ ಕುಟುಂಬಸ್ಥರು ಒಟ್ಟಿಗೆ ಅಂತ್ಯಕ್ರಿಯೆ ನಡೆಸಲು ಬಯಸಿದರೆ, ಸೌಮ್ಯ ಅವರ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿ ಮೃತದೇಹವನ್ನು ತಮ್ಮ ಮನೆಗೆ ಕೊಂಡೊಯ್ದಿದ್ದಾರೆ. ಹೀಗಾಗಿ ಅಂತ್ಯಕ್ರಿಯೆಗಳು ಪ್ರತ್ಯೇಕವಾಗಿ ನಡೆದಿವೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಕಾರಣವಾದ ಕಾರು ಹಾಗೂ ಚಾಲನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Spread the love

Leave a Reply

Your email address will not be published. Required fields are marked *