ಕೃಷ್ಣರಾಜಪೇಟೆ: ಕನ್ನಡ ಭಾಷೆ ಹಲವು ವರ್ಷಗಳ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆಯಾಗಿದ್ದು, ಕನ್ನಡ ನಾಡು, ನುಡಿ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ ಎಂದು ಸಮಾಜ ಸೇವಕ ಆರ್.ಟಿ.ಓ. ಮಲ್ಲಿಕಾರ್ಜುನ್ ಅವರು ತಿಳಿಸಿದರು.

ಪಟ್ಟಣದ ಟಿ.ಬಿ. ವೃತ್ತದ ಬಳಿ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಯ ಕರ್ನಾಟಕ ಸಂಘಟನೆಯ ಕೃಷ್ಣರಾಜಪೇಟೆ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ನೆರವೇರಿಸಿ, ಗೌರವಪೂರ್ವಕವಾಗಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.

ಕನ್ನಡ ಭಾಷೆಯ ಹಿರಿಮೆ, ಕನ್ನಡ ಸಾಹಿತ್ಯದ ಶ್ರೀಮಂತಿಕೆ ಹಾಗೂ ಕನ್ನಡ ನಾಡಿನ ಐತಿಹಾಸಿಕ ಪರಂಪರೆಯ ಕುರಿತು ಮಾತನಾಡಿದ ಅವರು ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು. ಜಯ ಕರ್ನಾಟಕ ಸಂಘಟನೆಯು ನಾಡು, ನುಡಿ ಮತ್ತು ಭಾಷೆಯ ರಕ್ಷಣೆಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಕನ್ನಡದ ವಿಚಾರದಲ್ಲಿ ಸಂಘಟನೆ ಸದಾ ಮುಂಚೂಣಿಯಲ್ಲಿರುತ್ತದೆ ಎಂದು ಹೇಳಿದರು.

ಕನ್ನಡ ನಾಡಿನ ಅಸ್ಮಿತೆ ಹಾಗೂ ಭಾಷೆಯ ಗೌರವವನ್ನು ಕಾಪಾಡಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ವರ್ಷವಿಡೀ ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಂಡು, ದೈನಂದಿನ ಜೀವನದಲ್ಲಿ ಕನ್ನಡದಲ್ಲಿಯೇ ಮಾತನಾಡುವ ಮತ್ತು ಕನ್ನಡ ಭಾಷೆಯ ಬಳಕೆಗೆ ಹೆಚ್ಚಿನ ಆದ್ಯತೆ ನೀಡುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಬಳಿಕ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಹೊನ್ನೇನಹಳ್ಳಿ ಸೋಮಶೇಖರ್ ಅವರು, ಕನ್ನಡ ನಾಡು-ನುಡಿ, ಭಾಷೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಸಂಘಟನೆಯು ನಡೆಸುತ್ತಿರುವ ಹೋರಾಟಗಳ ಕುರಿತು ವಿವರಿಸಿದರು. ಕನ್ನಡದ ರಕ್ಷಣೆಗಾಗಿ ಸಂಘಟನೆಯು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಹೋರಾಟ ನಡೆಸಲಿದೆ. ಕನ್ನಡ ರಾಜ್ಯೋತ್ಸವವು ಕೇವಲ ಸಂಭ್ರಮದ ಆಚರಣೆಯಾಗದೆ, ಕನ್ನಡದ ಉಳಿವಿಗಾಗಿ ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡುವ ದಿನವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಹೊನ್ನೇನಹಳ್ಳಿ ಸೋಮಶೇಖರ್, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಕಾಮನಹಳ್ಳಿ ಮಹೇಶ್, ತಾಲ್ಲೂಕು ಕಾರ್ಯಾಧ್ಯಕ್ಷ ಆನಂದಕುಮಾರ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಶಿವು, ಉಪಾಧ್ಯಕ್ಷ ಯುವರಾಜು, ನಗರ ಘಟಕದ ಅಧ್ಯಕ್ಷ ಅಕ್ಷಯ್, ಸಂಘಟನೆಯ ಕಾರ್ಯದರ್ಶಿ ಶಂಕರ್, ಯೋಗೇಶ್, ರಾಜು, ಉಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ, ಕಾರ್ಯಾಧ್ಯಕ್ಷೆ ಸರಸ್ವತಿ, ಯುವ ಘಟಕದ ಅಧ್ಯಕ್ಷೆ ಭಾಗ್ಯಮ್ಮ, ನಗರ ಘಟಕದ ಅಧ್ಯಕ್ಷೆ ಅನು, ರತ್ನಮ್ಮ, ದ್ರಾಕ್ಷಾಯಿಣಿ, ಗೌರಮ್ಮ, ಮಂಜಮ್ಮ, ರಾಜಮ್ಮ ಸೇರಿದಂತೆ ಸಂಘಟನೆಯ ವಿವಿಧ ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *