ಕೃಷ್ಣರಾಜಪೇಟೆ: ತಾಲ್ಲೂಕಿನ ಬಳ್ಳೇಕೆರೆ ಸರ್ಕಾರಿ ಹಿರಿಯ ಪ್ರೌಢಶಾಲೆಯ 2007-08ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ವತಿಯಿಂದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗುರುವಂದನಾ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ನರಸಿಂಹಾಚಾರ್ಯ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಗುರು-ಶಿಷ್ಯರ ಸಂಬಂಧವು ಎಂದೆಂದಿಗೂ ಅಮರವಾಗಿದ್ದು, ಅದು ಕೇವಲ ಅಕ್ಷರ ಕಲಿಸುವುದಕ್ಕೆ ಸೀಮಿತವಾಗಿಲ್ಲ. ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿ, ಅವರ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅಕ್ಷರ ಜ್ಞಾನದ ಜೊತೆಗೆ ಉತ್ತಮ ಸಂಸ್ಕಾರ, ಶಿಸ್ತು, ಮಾನವೀಯ ಮೌಲ್ಯಗಳು ಹಾಗೂ ಜೀವನದಲ್ಲಿ ಮುನ್ನಡೆಯುವ ಆತ್ಮವಿಶ್ವಾಸವನ್ನು ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು. ಗುರುಗಳನ್ನು ಸ್ಮರಿಸಿ, ಗೌರವಿಸಿ, ಅವರ ಆಶೀರ್ವಾದ ಪಡೆಯುವ ಇಂತಹ ಗುರುವಂದನಾ ಕಾರ್ಯಕ್ರಮಗಳು ವಿಶೇಷ ಮಹತ್ವವನ್ನು ಹೊಂದಿವೆ. ಹಲವು ವರ್ಷಗಳ ನಂತರ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮಗೆ ವಿದ್ಯೆ ಕಲಿಸಿದ ಶಿಕ್ಷಕರನ್ನು ಗೌರವಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಶಾಲಾ ದಿನಗಳ ಸವಿ ನೆನಪುಗಳನ್ನು ಮೆಲುಕು ಹಾಕುವುದರೊಂದಿಗೆ ಗುರು-ಶಿಷ್ಯರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಇಂತಹ ಕಾರ್ಯಕ್ರಮಗಳು ಮಾದರಿಯಾಗಿವೆ ಎಂದು ನರಸಿಂಹಾಚಾರ್ಯ ಅಭಿಪ್ರಾಯಪಟ್ಟರು.
ಗುರುಗಳಿಗೆ ಸನ್ಮಾನ, ಆಶೀರ್ವಾದ ಪಡೆದ ಹಳೆಯ ವಿದ್ಯಾರ್ಥಿಗಳು_
ಈ ಸಂದರ್ಭದಲ್ಲಿ 2007-08ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸಿದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು. ಗುರುಗಳಿಂದ ಆಶೀರ್ವಾದ ಪಡೆದ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ಸವಿ ನೆನಪುಗಳನ್ನು ಹಂಚಿಕೊಂಡು ಸಂಭ್ರಮಿಸಿದರು. ಹಲವು ವರ್ಷಗಳ ಬಳಿಕ ಸಹಪಾಠಿಗಳು ಹಾಗೂ ಶಿಕ್ಷಕರು ಒಂದೆಡೆ ಸೇರಿದ್ದರಿಂದ ಕಾರ್ಯಕ್ರಮವು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಅಗಲಿದ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ,
ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿಧನರಾದ ಶಂಭುಲಿಂಗಯ್ಯ ಮತ್ತು ಚಂದ್ರಶೆಟ್ಟಿ ಹಾಗೂ 2007-08ನೇ ಸಾಲಿನಲ್ಲಿ ವ್ಯಾಸಂಗ ಮಾಡಿ ನಿಧನರಾದ ಹಳೆಯ ವಿದ್ಯಾರ್ಥಿಗಳಾದ ನಾರ್ಗೋನಹಳ್ಳಿ ತ್ಯಾಗರಾಜು, ಹಳಿಯೂರು ಪ್ರಕಾಶ್, ನಾಟನಹಳ್ಳಿ ರೇವಣ್ಣ, ಬೊಮ್ಮೇಗೌಡನ ಕೊಪ್ಪಲು ಭರತ್, ಮೂದೂರು ಶಿವಕುಮಾರ್ ಸೇರಿದಂತೆ ಶಾಲೆಯ ಡಿ-ಗ್ರೂಪ್ ನೌಕರರಾಗಿದ್ದ ಮುರುಗಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಗೌರವ ನಮನಗಳನ್ನು ಅರ್ಪಿಸಲಾಯಿತು.
ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೆರುಗು,
ಗುರುವಂದನಾ ಸಮಾರಂಭದ ಹಿಂದಿನ ದಿನ ಹಳೆಯ ವಿದ್ಯಾರ್ಥಿಗಳಿಗಾಗಿ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹಳೆಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು. ಸ್ನೇಹಿತರೊಂದಿಗೆ ಆತ್ಮೀಯವಾಗಿ ಬೆರೆತು ಸಂತಸದ ಕ್ಷಣಗಳನ್ನು ಹಂಚಿಕೊಂಡರು.
ಶಾಲೆಯ ತರಗತಿ ಕೊಠಡಿಗಳಲ್ಲಿ ಶಿಕ್ಷಕರು ಮತ್ತು ಹಳೆಯ ವಿದ್ಯಾರ್ಥಿಗಳು ಹಿಂದಿನ ದಿನಗಳ ಘಟನೆಗಳು, ಸ್ನೇಹ, ಶೈಕ್ಷಣಿಕ ಅನುಭವಗಳು ಹಾಗೂ ಶಾಲಾ ಜೀವನದ ಸವಿ ನೆನಪುಗಳನ್ನು ಹಂಚಿಕೊಂಡರು. ಬಹಳ ವರ್ಷಗಳ ಬಳಿಕ ತಾವು ವಿದ್ಯಾಭ್ಯಾಸ ಮಾಡಿದ ಶಾಲೆಯಲ್ಲಿ ಮತ್ತೆ ಒಂದೆಡೆ ಸೇರಿದ್ದು ಎಲ್ಲರಲ್ಲೂ ಸಂತಸ ಮೂಡಿಸಿತು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ನರಸಿಂಹಾಚಾರ್ಯ, ಬಿ.ಆರ್. ವೆಂಕಟೇಶ್, ಶಿಕ್ಷಕರಾದ ಬಿ. ನಾಗೇಶ್, ಹೆಚ್.ಆರ್. ರವಿಕುಮಾರ್, ಡಿ.ಆರ್. ರಮೇಶ್, ಸಿದ್ದಮಲ್ಲಪ್ಪ, ಡಿ.ಎಸ್. ಪುಟ್ಟರಾಜು, ಹೆಚ್.ಟಿ. ಶ್ರೀನಿವಾಸ್, ಕಾಂತರಾಜು, ನವೀನ್ ಕುಮಾರ್, ಚನ್ನವೀರ ಗೌಡ, ಜ್ಯೋತಿ, ರೇಖಾ ಪಿ.ಆರ್., ಸಾಯಿರಭಾನು ಸೇರಿದಂತೆ ಹಾಲಿ ಶಿಕ್ಷಕರು, ಎಸ್ಟಿಎಂಸಿ ಅಧ್ಯಕ್ಷರು, 2007-08ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಗುರುಗಳ ಮೇಲಿನ ಗೌರವ, ಹಳೆಯ ವಿದ್ಯಾರ್ಥಿಗಳ ನಡುವಿನ ಸ್ನೇಹ ಹಾಗೂ ಶಾಲೆಯೊಂದಿಗಿನ ಭಾವನಾತ್ಮಕ ಸಂಬಂಧವನ್ನು ಸಾರಿದ ಈ ಗುರುವಂದನಾ ಕಾರ್ಯಕ್ರಮವು ಎಲ್ಲರ ಮನಸ್ಸಿನಲ್ಲಿ ಸ್ಮರಣೀಯ ಕ್ಷಣವಾಗಿ ಉಳಿಯಿತು.
