ಮನೆಬಿಟ್ಟು ಪ್ರಿಯಕರನ ಜೊತೆ ತೆರಳಿದ್ದ ಯುವತಿ ಬಾವಿಯಲ್ಲಿ ಶ*ವಾಗಿ ಪತ್ತೆ

ಚಿತ್ರದುರ್ಗ: ನವವಿವಾಹಿತೆಯೊಬ್ಬರು ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಹಾದೇವಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಕಾರಿಪಾಲಯ್ಯನಹಟ್ಟಿ ಮೂಲದ ಸುಮಲತಾ (21) ಎಂದು ಗುರುತಿಸಲಾಗಿದೆ.

ಸುಮಲತಾ ಅವರು ಆಗಸ್ಟ್ 13ರಂದು ಮನೆಬಿಟ್ಟು ಗಜೇಂದ್ರ ಎಂಬುವವರೊಂದಿಗೆ ತೆರಳಿದ್ದರು ಎನ್ನಲಾಗಿದೆ. ಬಳಿಕ ಇಬ್ಬರೂ ಪ್ರೇಮ ವಿವಾಹ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಆದರೆ ಭಾನುವಾರ ಸಂಜೆ ಮಹಾದೇವಪುರ ಗ್ರಾಮದ ಬಾವಿಯಲ್ಲಿ ಸುಮಲತಾ ಅವರ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕೊಲೆ ಆರೋಪ

ಸುಮಲತಾ ಅವರ ಸಾವಿನ ಹಿಂದೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಗುಂಡಯ್ಯನಹಟ್ಟಿ ಗಜೇಂದ್ರ ಸೇರಿದಂತೆ ಮತ್ತಿತರರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ಹಾಗೂ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದು, ಸಾವಿನ ನಿಖರ ಕಾರಣದ ಕುರಿತು ತನಿಖೆ ನಡೆಯಬೇಕಿದೆ.

ಮಹಾದೇವಪುರ ಗ್ರಾಮದ ಬಾವಿಯಲ್ಲಿ ಶವ ಪತ್ತೆಯಾದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಹೊರತೆಗೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಘಟನೆ ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸುಮಲತಾ ಅವರ ಸಾವಿನ ಹಿನ್ನೆಲೆ, ಅವರು ಮನೆಬಿಟ್ಟು ತೆರಳಿದ ಸಂದರ್ಭ ಹಾಗೂ ನಂತರ ನಡೆದ ಬೆಳವಣಿಗೆಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತನಿಖೆಯ ಬಳಿಕವೇ ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಹೊರಬರಬೇಕಿದೆ.

Spread the love

Leave a Reply

Your email address will not be published. Required fields are marked *