ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೃದಯವಿದ್ರಾವಕ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಳೇ ಪ್ರಿಯತಮೆಯ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದುದೇ ಯುವಕನ ಪ್ರಾಣಕ್ಕೆ ಕಾರಣವಾಗಿರುವ ಘಟನೆ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದ ಯುವಕನನ್ನು ಉಡೇವಾ ಗ್ರಾಮದ ಮಂಜುನಾಥ್ (28) ಎಂದು ಗುರುತಿಸಲಾಗಿದೆ. ಮಂಜು ಕೆಲ ಕಾಲ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆಯ ಪ್ರೇಮ ಸಂಬಂಧವನ್ನು ವಿರೋಧಿಸಿದ್ದ ಕುಟುಂಬಸ್ಥರು, ಆಕೆಯ ಮದುವೆಯನ್ನು ವೇಣು ಎಂಬ ಮತ್ತೊಬ್ಬ ಯುವಕನೊಂದಿಗೆ ನಿಶ್ಚಯ ಮಾಡಿದ್ದರು. ಈ ವಿಚಾರದಿಂದ ಮಂಜು ಮತ್ತು ಯುವತಿಯ ನಡುವೆ ದೂರವಿದ್ದು, ಪ್ರೇಮ ಸಂಬಂಧ ಕೊನೆಗೊಂಡಿತ್ತು.
ಆದರೆ, ಎರಡು ದಿನಗಳ ಹಿಂದೆ ಯುವತಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಜುನಾಥ್ ಸಾಮಾಜಿಕ ಜಾಲತಾಣದಲ್ಲಿ ಆಕೆಗೆ ಶುಭಾಶಯ ಕೋರಿದ್ದ. ಈ ವಿಷಯ ಯುವತಿಯ ಮನೆಯವರಿಗೆ ತಿಳಿಯುತ್ತಿದ್ದಂತೆ, ಆಕೆಯ ಅಣ್ಣ ಹಾಗೂ ನಿಶ್ಚಿತಾರ್ಥ ಮಾಡಿಕೊಂಡಿದ್ದ ವೇಣು ತೀವ್ರವಾಗಿ ಕೆರಳಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಮಂಜುನಾಥ್‌ಗೆ ಕರೆ ಮಾಡಿ ಮಾತನಾಡುವ ನೆಪದಲ್ಲಿ ಅತ್ತಿಗನಾಳು ಗ್ರಾಮಕ್ಕೆ ಕರೆಸಿಕೊಂಡಿದ್ದಾರೆ. ಮಾತುಕತೆ ನಡೆಸುವ ವೇಳೆ ಏಕಾಏಕಿ ಚಾಕುವಿನಿಂದ ಮಂಜುನಾಥ್‌ಗೆ ಇರಿದು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಂಜುನಾಥ್‌ನ್ನು ತಕ್ಷಣ ತರೀಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು.
ಆದರೆ, ಚಿಕಿತ್ಸೆ ಫಲಿಸದೇ ಮಂಜುನಾಥ್ ಸಾವನ್ನಪ್ಪಿದ್ದಾನೆ. ಈ ಘಟನೆಯಿಂದ ಎದೆಮಟ್ಟಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ಮಂಜು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಪ್ರೀತಿ, ಅಸೂಯೆ ಹಾಗೂ ಕೋಪದ ಮಿಶ್ರಣದಿಂದ ನಡೆದ ಈ ಕ್ರೂರ ಹತ್ಯೆ ಮತ್ತೊಮ್ಮೆ ಸಮಾಜವನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.
