ನೆಲಮಂಗಲ, ಡಿಸೆಂಬರ್ 25: ಮದುವೆಯಾಗಿ ಕೇವಲ ಒಂದು ತಿಂಗಳೂ ಪೂರೈಸುವ ಮುನ್ನವೇ ನವವಿವಾಹಿತೆ ನಿಗೂಢವಾಗಿ ಮೃತಪಟ್ಟಿರುವ ದುರ್ಘಟನೆ ನೆಲಮಂಗಲದಲ್ಲಿ ನಡೆದಿದೆ. 26 ವರ್ಷದ ಐಶ್ವರ್ಯ ಮೃತ ಯುವತಿಯಾಗಿದ್ದು, ಆಕೆಯ ಪತಿಯೇ ಈ ಸಾವಿನ ಹಿಂದೆ ಕೈವಾಡವಿದೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಕೇವಲ 27 ದಿನಗಳ ಹಿಂದೆ ಮಾತ್ರ ಲಿಖಿತ್ ಸಿಂಹ ಅವರೊಂದಿಗೆ ಐಶ್ವರ್ಯ ವಿವಾಹವಾಗಿತ್ತು. ಸುಂದರ ಭವಿಷ್ಯ ಮತ್ತು ಸಂಸಾರದ ಕನಸು ಕಂಡು ಗೃಹಸ್ಥ ಜೀವನ ಆರಂಭಿಸಿದ್ದ ಐಶ್ವರ್ಯ, ಸಾಂಸಾರಿಕ ಬದುಕು ಸರಿಯಾಗಿ ಶುರುವಾಗುವ ಮೊದಲುವೇ ಪ್ರಾಣ ಕಳೆದುಕೊಂಡಿರುವುದು ಕುಟುಂಬಸ್ಥರನ್ನು ಆಘಾತಕ್ಕೀಡು ಮಾಡಿದೆ.
ಪತ್ನಿಗೆ ಕಿರುಕುಳ ನೀಡಿದ ಆರೋಪ
ಮೃತ ಐಶ್ವರ್ಯ ಮೂಲತಃ ನಾಗಮಂಗಲ ನಿವಾಸಿಗಳಾದ ಮಮತಾ ಮತ್ತು ಕೃಷ್ಣಮೂರ್ತಿ ದಂಪತಿಯ ಹಿರಿ ಮಗಳು. ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಬಾಗಲಗುಂಟೆ ಪೈಪ್‌ಲೈನ್ ಮಲ್ಲಸಂದ್ರ ನಿವಾಸಿ ಲಿಖಿತ್ ಸಿಂಹ ಅವರಿಗೆ ಐಶ್ವರ್ಯಳನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆ ಸಂಭ್ರಮದಿಂದಲೇ ನಡೆದಿದ್ದರೂ, ಮದುವೆಯಾದ ಕೆಲವೇ ದಿನಗಳಲ್ಲಿ ಐಶ್ವರ್ಯಗೆ ಪತಿ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ವಿಷಯವಾಗಿ ಕುಟುಂಬಸ್ಥರಲ್ಲಿ ಆತಂಕ ಉಂಟಾಗಿದ್ದು, ನಿನ್ನೆ ಬೆಳಿಗ್ಗೆ ಎರಡು ಕುಟುಂಬಗಳ ನಡುವೆ ರಾಜಿ ಪಂಚಾಯ್ತಿ ಕೂಡ ನಡೆದಿತ್ತು.
ಆದರೆ ರಾಜಿ ಮಾತುಕತೆ ನಡೆದ ಕೆಲವೇ ಗಂಟೆಗಳಲ್ಲಿ ಮತ್ತೆ ಐಶ್ವರ್ಯ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ನಿನ್ನೆ ಸಂಜೆ ವೇಳೆಗೆ ಲಿಖಿತ್ ತಮ್ಮ ಕರೆ ಮಾಡಿ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಪಡೆದು ಆತಂಕಗೊಂಡ ಪೋಷಕರು ಹಾಗೂ ಸಂಬಂಧಿಕರು ಮನೆಗೆ ಆಗಮಿಸಿ ನೋಡಿದಾಗ, ಐಶ್ವರ್ಯ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ.
ಆದರೆ ಮನೆ ಬಾಗಿಲು ಹೊರಗಿನಿಂದ ಮುಚ್ಚಿದ್ದುದರಿಂದ ಹಾಗೂ ಹಲವು ಅನುಮಾನಾಸ್ಪದ ಅಂಶಗಳು ಕಂಡುಬಂದ ಕಾರಣ, ಇದು ಆತ್ಮಹತ್ಯೆಯಲ್ಲ, ಗಂಡನೇ ನೇಣು ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಮೃತಳ ಪೋಷಕರು ಗಂಭೀರ ಆರೋಪಗಳನ್ನು ಮುಂದಿಟ್ಟಿದ್ದಾರೆ.
ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಐಶ್ವರ್ಯ ಪತಿ ಲಿಖಿತ್ ಸಿಂಹನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾವಿನ ನಿಖರ ಕಾರಣ ತಿಳಿದುಬರುವ ನಿಟ್ಟಿನಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
