• 33 ಪ್ಯಾಕೇಜ್ಗಳ ಟೆಂಡರ್ನಲ್ಲಿ ಶೇ.14ರಷ್ಟು ಹೆಚ್ಚಿನ ದರದಲ್ಲಿ ಗುತ್ತಿಗೆ ನೀಡಿರುವ ಆರೋಪ
• ಮುಖ್ಯ ಕಾರ್ಯದರ್ಶಿ ಸೇರಿದಂತೆ ಏಳು ಅಧಿಕಾರಿಗಳಿಗೆ ದೂರು ಸಲ್ಲಿಸಿದ CRF ಅಧ್ಯಕ್ಷ ಕೆ.ಎ. ಪಾಲ್
ಬೆಂಗಳೂರು: ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆ ಟೆಂಡರ್ ಪ್ರಕ್ರಿಯೆಯಲ್ಲಿ ಸುಮಾರು ₹350 ಕೋಟಿ ಸಾರ್ವಜನಿಕ ಹಣಕ್ಕೆ ಆರ್ಥಿಕ ಹೊರೆ ಉಂಟಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಉನ್ನತ ಮಟ್ಟದ ಸ್ವತಂತ್ರ ತನಿಖೆ ನಡೆಸುವಂತೆ Citizen Rights Foundation (CRF) ಅಧ್ಯಕ್ಷ ಕೆ.ಎ. ಪಾಲ್ (K.A. Paul) ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ವ್ಯಾಪ್ತಿಯ 33 ಪ್ಯಾಕೇಜ್ಗಳ ಟೆಂಡರ್ನಲ್ಲಿ ಅಂದಾಜು ಮೊತ್ತಕ್ಕಿಂತ ಶೇ.14ರಷ್ಟು ಹೆಚ್ಚಿನ ದರದಲ್ಲಿ ಗುತ್ತಿಗೆ ನೀಡಲಾಗಿದೆ ಎಂಬುದು ಫೌಂಡೇಶನ್ನ ಪ್ರಮುಖ ಆರೋಪ. ಹಣಕಾಸು ಇಲಾಖೆಯ ಆಕ್ಷೇಪಣೆಗಳನ್ನು ಕಡೆಗಣಿಸಲಾಗಿದೆಯೇ, ಟೆಂಡರ್ ಅರ್ಹತಾ ಮಾನದಂಡಗಳನ್ನು ನಿರ್ದಿಷ್ಟ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಬದಲಾಯಿಸಲಾಗಿದೆಯೇ ಎಂಬ ಬಗ್ಗೆಯೂ ತನಿಖೆಗೆ ಆಗ್ರಹಿಸಿದೆ.
ವಿಧಾನ ಪರಿಷತ್ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಟೆಂಡರ್ ಪ್ರಕ್ರಿಯೆ ಮುಂದುವರಿಸಿ, ಐದು ಪ್ಯಾಕೇಜ್ಗಳಿಗೆ ಕಾರ್ಯಾದೇಶ ನೀಡಲಾಗಿದೆ ಎಂಬ ಆರೋಪವನ್ನೂ CRF ಮುಂದಿಟ್ಟಿದೆ. ಈ ಸಂಬಂಧ ಈ ಹಿಂದೆ ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿದ್ದ ಕೆ.ಎ. ಪಾಲ್, ಇದೀಗ ರಾಜ್ಯ ಸರ್ಕಾರಕ್ಕೂ ದೂರು ನೀಡಿದ್ದಾರೆ.
ಜುಲೈ 30, 2025ರ ಟೆಂಡರ್ ಅಧಿಸೂಚನೆಯಿಂದ ಆರಂಭಿಸಿ 33 ಪ್ಯಾಕೇಜ್ಗಳ ಸಂಪೂರ್ಣ ಪ್ರಕ್ರಿಯೆ, ಸೆಪ್ಟೆಂಬರ್ ಮತ್ತು ಅಕ್ಟೋಬರ್ 2026ರಲ್ಲಿ ಪ್ರಕಟವಾದ ಹೊಸ ಟೆಂಡರ್ಗಳು ಹಾಗೂ ಸೆಪ್ಟೆಂಬರ್ 19, 23 ಮತ್ತು ಅಕ್ಟೋಬರ್ 8ರ ಅಧಿಸೂಚನೆಗಳನ್ನು ಪರಿಶೀಲಿಸುವಂತೆ ಮನವಿ ಮಾಡಲಾಗಿದೆ.

ಹಣಕಾಸು ಇಲಾಖೆಯ ಆಕ್ಷೇಪಣೆಗಳು, ಕಡತ ಟಿಪ್ಪಣಿಗಳು, ಅನುಮೋದನೆಗಳು, ತಾಂತ್ರಿಕ ಮತ್ತು ಹಣಕಾಸು ಬಿಡ್ಗಳ ಮೌಲ್ಯಮಾಪನ ಹಾಗೂ ಇ-ಪ್ರೊಕ್ಯೂರ್ಮೆಂಟ್ ದಾಖಲೆಗಳನ್ನು ಪರಿಶೀಲಿಸಬೇಕು. ಸರ್ಕಾರ ರಚಿಸಿದ್ದ ಅಂಜುಂ ಪರ್ವೇಜ್ ನೇತೃತ್ವದ ಸಮಿತಿಯ ವರದಿ ಮತ್ತು ಶಿಫಾರಸುಗಳ ಅನುಷ್ಠಾನವನ್ನೂ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಲಾಗಿದೆ.
BSWML ಅಧಿಕಾರಿಗಳಾದ ಡೆಪ್ಯುಟಿ ಜನರಲ್ ಮ್ಯಾನೇಜರ್ ಚಂದ್ರಶೇಖರ್, ಚೀಫ್ ಜನರಲ್ ಮ್ಯಾನೇಜರ್ ಎಸ್.ವಿ. ರಾಜೇಶ್ ಮತ್ತು ಸಿಇಒ ಕರೀಗೌಡ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸುವಂತೆ CRF ಕೋರಿದೆ.
ಅಕ್ರಮಗಳು ಸಾಬೀತಾದರೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಟೆಂಡರ್ ರದ್ದುಪಡಿಸಿ ಮರು ಟೆಂಡರ್ ನಡೆಸಬೇಕು. ಈ ಕುರಿತು ನವೆಂಬರ್ 12ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಏಳು ಪ್ರಮುಖ ಅಧಿಕಾರಿಗಳಿಗೆ ದೂರು ಸಲ್ಲಿಸಿರುವ CRF, ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸ್ವತಂತ್ರ ತನಿಖಾ ಸಮಿತಿ ರಚಿಸುವಂತೆ ಆಗ್ರಹಿಸಿದೆ.
